ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿರುವ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮೊದಲ ಭಾಷಣದಲ್ಲಿಯೇ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ' ಎಂದು ಟೀಕಾಪ್ರಹಾರ ನಡೆಸಿದ್ದರು. ಈ ಹೇಳಿಕೆ ಬಿಜೆಪಿ ಪಾಳಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 'ಇಡೀ ಹಿಂದೂ ಸಮಾಜವನ್ನೇ ಹಿಂಸಾ ಪ್ರವೃತ್ತಿಯಿಂದ ಕೂಡಿದೆ ಎನ್ನುವುದು ತುಂಬಾ ಗಂಭೀರ ವಿಚಾರ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ರಾಹುಲ್ ಗಾಂಧಿಯವರು, 'ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿಕೆ ನೀಡಿದ್ದಲ್ಲ. ಹಿಂದೂ ಸಮಾಜ ಯಾವತ್ತೂ ದ್ವೇಷ ಹಾಗೂ ಹಿಂಸೆಯನ್ನು ಹರಡುವುದಿಲ್ಲ. ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಅಂದರೆ ಇಡೀ ಹಿಂದೂ ಸಮಾಜವಾಗೋಲ್ಲ. ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತದೆ ಎಂದು ನಾನು ಹೇಳಿದ್ದೇನೆಯೇ ವಿನಃ, ಹಿಂದೂ ಸಮಾಜದ ಬಗ್ಗೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿಯವರು ಹೇಳಿದ್ದರಲ್ಲಿ ತಪ್ಪೇನಿದೆ. ಹಿಂದೂ ಸಮಾಜವೆಂದರೆ ಬರಿಯ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಮಾತ್ರವೇ?. ಅದರಾಚೆಗೆ ಏನೂ ಇಲ್ಲವೇ?. ಯಾಕೆ ಈ ಬಿಜೆಪಿ ಒಂದು ಪರಿಧಿಯೊಳಗಡೆ ಹಿಂದೂ ಸಮಾಜವನ್ನು ಕಟ್ಟಿ ಹಾಕುತ್ತದೆ. ಆರ್‌ಎಸ್ಎಸ್, ಬಿಜೆಪಿ ಮತ್ತು ಮೋದಿಯವರು ಬಂದ ಬಳಿಕವಲ್ಲ ಹಿಂದೂ ಸಮಾಜ ಹುಟ್ಟಿದ್ದು. ಅಥವಾ ಹಿಂದೂ ಸಮಾಜದ ಹುಟ್ಟಿಗೆ ಇವರಾರು ಕಾರಣವಲ್ಲ. ಸಹಸ್ರಾರು ವರ್ಷಗಳಿಂದ ಹಿಂದೂ ಸಮಾಜ ಬೆಳೆದು ಬಂದಿದೆ. ಎಂಥಹ ದಾಳಿಕೋರರು ಬಂದರೂ ಹಿಂದೂ ಸಮಾಜ ಒಂದಷ್ಟು ಅಲುಗಾಡಿಲ್ಲ. ಪರಕೀಯರ ಕಪಿಮುಷ್ಟಿಯಲ್ಲಿ ಕೊಂಚ ಕಾಲ ನಲುಗಿರಬಹುದು ಹೊರತು, ತನ್ನ ಅಸ್ತಿತ್ವವನ್ನು ಅದು ಎಂದೂ ಕಳೆದುಕೊಂಡಿರಲಿಲ್ಲ. ಆದ್ದರಿಂದ ತಮಗೆ ಹೇಳಿದ ಮಾತನ್ನು ಬಿಜೆಪಿಯವರು ಇಡೀ ಹಿಂದೂ ಸಮಾಜಕ್ಕೆ ಅನ್ವಯಿಸಿ ಹೇಳುತ್ತದೆ ಎಂದು ತಪ್ಪುತಪ್ಪಾಗಿ ಬಿಂಬಿಸುವುದೇಕೆ?. ಇವರೇಕೆ ಹಿಂದೂ ಸಮಾಜವನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾಡುವುದು.
ಈ ಬಾರಿ ಅಧಿಕಾರ ವಹಿಸಿಕೊಂಡಾಗ ಮಿತ್ರ ಪಕ್ಷಗಳನ್ನು ಮಾತ್ರವಲ್ಲ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವುದಾಗಿ ಮೋದಿ ಹೇಳಿದ್ದರು. ಇನ್ನು ಮುಂದೆಯೂ ಅದೇ ರೀತಿ ಅವರು ನಡೆದುಕೊಂಡರೆ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಪಕ್ಷಗಳಿಗೂ ಗೌರವ ಬರಬಹುದು. ಆದರೆ ಈ ಬಾರಿಯೂ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಮಾತು ದಾಖಲಾಗದಂತೆ, ಅವರ ಮಾತು ಎಲ್ಲರಿಗೂ ಕೇಳದಂತೆ ಧ್ವನಿವರ್ಧಕವನ್ನು ಸ್ವಿಚ್ ಆಫ್ ಮಾಡಲಾಗಿದೆ. ಅಲ್ಲದೆ ಲೋಕಸಭಾ ಕಡತದಿಂದ ಭಾಷಣಕ್ಕೆ ಕೊಕ್ ನೀಡಿರುವುದಕ್ಕೆ ರಾಹುಲ್ ಗಾಂಧಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ಪತ್ರವನ್ನು ಬರೆದು ಕಡಿತದಿಂದ ತೆಗೆದುಹಾಕಿರುವ ಭಾಷಣವನ್ನು ಮರುಸ್ಥಾಪಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡುವಾಗ ಮೈಕ್ ಆಫ್ ಮಾಡೋದು, ಭಾಷಣದ ಭಾಗ ದಾಖಲಾಗದಂತೆ ಮಾಡುವುದು ಸರಿಯಾದ ಕ್ರಮವಲ್ಲ. ಇದು ಪ್ರತಿಪಕ್ಷದ ಬಗ್ಗೆ ಬಿಜೆಪಿಗಿರುವ ಅಸಹನೀಯತೆಯನ್ನು ತೋರಿಸುತ್ತದೆ. ಪ್ರತಿಪಕ್ಷವನ್ನು ಶತ್ರುಗಳಂತೆ ಕಾಣುವ ಬದಲು ವಿಶ್ವಾಸಕ್ಕೆ ತೆಗೆದುಕೊಂಡು ಸಹಮತದ ಸರಕಾರವನ್ನು ಆಡಳಿತರೂಢ ಬಿಜೆಪಿ ನೀಡಲಿ.

Social Icons