Editorial| ಮಳೆಗಾಲದ ನಿರ್ಲಕ್ಷ್ಯದ ಜೀವಹಾನಿಗಳಿಗೆ ಬೀಳಲಿ ಕಡಿವಾಣ

ಮಳೆಗಾಲ ಆರಂಭಗೊಂಡು ಒಂದು ತಿಂಗಳು ಕಳೆದುಹೋಗಿದೆ. ಮಳೆಯ ಜೊತೆಗೆ ಮಳೆಯಿಂದ ಆಗಿರುವ ಜೀವಹಾನಿಗಳೂ ಹೆಚ್ಚಾಗಿವೆ. ಇಲ್ಲಿ ಜೀವ ಕಳೆದುಕೊಂಡಿರುವುದು ಅಮಾಯಕ ಜೀವಗಳು. ಆದರೆ ಈ ಜೀವಹಾನಿಗೆ, ಹೋಗಿರುವ ಪ್ರಾಣಗಳಿಗೆ ಬೆಲೆ ಯಾರು ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ದೊರೆತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು, ಒಂದು ಬಾರಿ ಸ್ಥಳಕ್ಕೆ ಭೇಟಿ ನೀಡಿ ವಾಪಸ್ ಹೋಗಿಬಿಡುತ್ತಾರೆ ಹೊರತು ಆ ಕುಟುಂಬಗಳಿಗೆ ಶಾಶ್ವತ ಪರಿಹಾರದ ವ್ಯವಸ್ಥೆ ಯಾರದ್ದು ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ. 



ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚೇ ಅನಾಹುತಗಳಾಗಿವೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ಆವರಣ ಗೋಡೆ (ಕಂಪೌಂಡ್‌) ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳ ಸಹಿತ ದಂಪತಿ ಮೃತಪಟ್ಟಿದ್ದಾರೆ. ಅಂತೆಯೇ ಮಂಗಳೂರು ನಗರದಲ್ಲೇ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಇಬ್ಬರು ಆಟೋ ಚಾಲಕರು ದುರ್ಮರಣ ಹೊಂದಿದ್ದಾರೆ. ಜೊತೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಶಾಕ್ ಗೆ ಒಳಗಾಗಿ ಹದಿಹರೆಯದ ಯುವತಿಯೂ ಬಲಿಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಪುತ್ತೂರು ಬನ್ನೂರು ಎಂಬಲ್ಲಿ ರಾತ್ರೋರಾತ್ರಿ ಮನೆಯ ಮೇಲೆ ಗೋಡೆ ಕುಸಿದು ಬಿದ್ದಿದೆ. ಜೊತೆಗೆ ಜು.3ರಂದು ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಹಂತದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ, ಕಡಲ ತೀರದ ನಿವಾಸಿಗಳಿಗೆ ಕಡಲ್ಕೊರೆತ ಎನ್ನುವುದು ವರ್ಷಂಪ್ರತಿ ಸಹಿಸಿಕೊಳ್ಳಲೇಬೇಕಿರುವ ಸಮಸ್ಯೆಯಾಗಿದೆ. 

ಪ್ರತಿಬಾರಿ ಮಳೆ ಬಂದು ಅನಾಹುತಗಳಾದಾಗ ಕಾಮಗಾರಿಗೆ ಇಷ್ಟು ಹಣ ಖರ್ಚು ಮಾಡಿದ್ದೇವೆ ಎಂತಲೋ ಇಲ್ಲವೇ ಇಷ್ಟು ಮೊತ್ತ ನಿಗದಿಪಡಿಸಿದ್ದೇವೆ ಎಂದು ಸರಕಾರ ಹೇಳುತ್ತದೆ. ಇದೊಂದು ಯಾಂತ್ರಿಕ ವಿಧಿಯಂತಾಗಿಬಿಟ್ಟಿದೆ. ಪರಿಹಾರದ ಘೋಷಣೆಯೂ ಆಗುತ್ತದೆ, ಆದರೆ ಜೀವಗಳು ಹೋದ ಮೇಲೆ ಯಾವ ಪರಿಹಾರ ನೀಡಿದರೆ ಏನು ಪ್ರಯೋಜನ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇನ್ನು ಮುಂದಾದರೂ ಎದುರಾಗಬಹುದಾದ ಅನಾಹುತಗಳ ಬಗ್ಗೆ ಒಂದು ಸಮೀಕ್ಷೆ ನಡೆಸಿ, ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಂಡು, ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕೆನ್ನುವುದು ಆಶಯ.