ರಾಜ್ಯದಲ್ಲಿ ಒಂದೆಡೆ ಸುರಿದ ಭಾರೀ ಮಳೆಯು ಹಲವಾರು ಜಿಲ್ಲೆಗಳಲ್ಲಿ ಆವಾಂತರ ಸೃಷ್ಟಿಮಾಡಿದೆ. ಅದರ ಜೊತೆಜೊತೆಗೆ ಮಳೆಗಾಲವು ಭಯಾನಕ ಡೆಂಗ್ಯೂ ಜ್ವರದ ಹೆಚ್ಚಳಕ್ಕೆ ಕಾರಣವಾಗಿವೆ. ರಾಜ್ಯದಲ್ಲಿ ಡೆಂಗ್ಯೂ ರುದ್ರನರ್ತನ ಆರಂಭಗೊಂಡಿದ್ದು, ಅನೇಕ ಜೀವಗಳು ಬಲಿಯಾಗಿವೆ. ಒಬ್ಬ ವೈದ್ಯರು ಸೇರಿ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಬಹುಶಃ ಡೆಂಗ್ಯೂ
ಅಪಾಯದಲ್ಲಿದ್ದಾರೆ ಮತ್ತು ಪ್ರತಿ ವರ್ಷ ಅಂದಾಜು 100-400 ಮಿಲಿಯನ್ ಸೋಂಕುಗಳು ಸಂಭವಿಸುತ್ತವೆ. ರಾಜ್ಯ ಸರಕಾರ ಸಮರೋಪಾದಿಯಲ್ಲಿ
ಡೆಂಗ್ಯೂ ನಿಯಂತ್ರಣಕ್ಕೆ ಕಟಿಬದ್ಧವಾಗಬೇಕಿದೆ. ಡೆಂಗ್ಯೂ ಜ್ವರ ನಿಯಂತ್ರಣ
ಎಂದರೆ ಸೊಳ್ಳೆಗಳ ನಿಯಂತ್ರಣ. ಡೆಂಗ್ಯೂ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ
ನಿಯಂತ್ರಣ ಬಹಳ ಮುಖ್ಯವಾದುದು. ಡೆಂಗ್ಯೂ ಜ್ವರ ನಿಯಂತ್ರಣ ಆಗದೆ
ಇದ್ದಲ್ಲಿ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಕಾಯಿಲೆ ಬರುವ ಸಾಧ್ಯತೆಗಳೂ ಇವೆ.
ಡೆಂಗ್ಯೂ ತಪಾಸಣೆಯು ಕೂಡ ದುಬಾರಿಯಾದುದು. ಅನೇಕ ಮಂದಿ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ
ಲಭ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಿದ್ದಾರೆ. ಆದರೆ ಅಲ್ಲಿ ಅಧಿಕ ದರ ವಸೂಲಿ ಮಾಡಲಾಗುತ್ತಿದೆ
ಎನ್ನುವ ಆರೋಪಗಳಿವೆ. ಹೀಗಾಗಿ ಸರಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ
ಪಡೆದರೆ ಅಂಥ ಆಸ್ಪತ್ರೆ,
ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ
ಹೆಚ್ಚಿಸಬೇಕಿದೆ. ಬ್ಲಡ್ ಬ್ಯಾಂಕ್ ಗಳಲ್ಲಿ ಪ್ಲೇಟ್ ಲೆಟ್ ಸಂಗ್ರಹ ಸಾಕಷ್ಟು ಇರುವಂತೆ ನೋಡಿಕೊಳ್ಳಬೇಕಿದೆ.
ಜನರಿಗೆ ಸ್ವಚ್ಛತೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಫ್ಲೈಓವರ್, ಅಂಡರ್ ಪಾಸ್, ಅಗೆದ ರಸ್ತೆ, ಸೇತುವೆ ಮೊದಲಾದವುಗಳು ಸಕಾಲದಲ್ಲಿ ಮುಗಿಯುತ್ತಿಲ್ಲ. ಎಲ್ಲವೂ ಅರ್ಧರ್ಧವಾಗಿದ್ದು, ಮಳೆ
ಬಂದಾಗ ಅಲ್ಲೆಲ್ಲ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಹೀಗಾಗಿ ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ
ಇಲಾಖೆ, ಪಂಚಾಯತ್ಗಳು, ಜಿಲ್ಲಾ ಪಂಚಾಯತ್, ನೀರು ಸರಬರಾಜು
ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡಬೇಕಿದೆ. ಡೆಂಗ್ಯೂ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್
ರಚಿಸಬೇಕಿದೆ.
ಸರಕಾರದ ಜೊತೆಜೊತೆಗೆ
ಜನರ ಪಾತ್ರವೂ ಡೆಂಗ್ಯೂ ನಿಯಂತ್ರಣದಲ್ಲಿ ಬಹು ಮುಖ್ಯವಾದುದು. ನಿಂತ ನೀರು ಮತ್ತು ತೇವಭರಿತ ವಾತಾವರಣಗಳು ಸೊಳ್ಳೆಗಳ
ಸಂತಾನೋತ್ಪತ್ತಿಗೆ ಕಾರಣಗಳು. ಡೆಂಗ್ಯೂವಿಂದ ಆಗುವ ಆರೋಗ್ಯದ ಅಪಾಯಗಳ ನಿವಾರಣೆಗೆ ನಾವು ಹಲವಾರು
ಅಂಶಗಳನ್ನು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಜನರು ಹೊರಗೆ ಹೋಗುವಾಗ ಹಾಗೂ ಸೊಳ್ಳೆಗಳು ಹೆಚ್ಚು
ಸಕ್ರಿಯವಾಗಿರುವ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಪರಿಣಾಮಕಾರಿ ಸೊಳ್ಳೆ ನಿವಾರಕವನ್ನು ಬಳಸಬೇಕು. ದೇಹವನ್ನು ಸೊಳ್ಳೆಯಿಂದ ರಕ್ಷಿಸುವ ಉದ್ದ ತೋಳಿರುವ
ಶರ್ಟ್ ಗಳು ಕಾಲು ಮುಚ್ಚುವ ಪ್ಯಾಂಟ್ ಗಳು, ಸಾಕ್ಸ್ ಇವುಗಳನ್ನು
ಧರಿಸಬಹುದು. ಅಷ್ಟೇ ಅಲ್ಲದೆ, ಮನೆಯ ಸುತ್ತಲೂ
ಯಾವುದೇ ನಿಂತಿರುವ ನೀರನ್ನು ನಿಯಮಿತವಾಗಿ ಪರೀಕ್ಷಿಸಿ ಮತ್ತು ಇದ್ದಲ್ಲಿ ತೊಡೆದುಹಾಕಬೇಕು, ಏಕೆಂದರೆ ಇವು ಗಳು ಡೆಂಗ್ಯೂ ಹರಡುವ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಕೇಂದ್ರಗಳಾಗಿ
ಪರಿಣಮಿಸಬಹುದು. ಯಾವುಧೇ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಆರೋಗ್ಯ ವೃತ್ತಿ ಪರರನ್ನು ಸಂಪರ್ಕಿಸದೆ ಸ್ವಯಂ ಔಷದಿ
ತೆಗೆದುಕೊಳ್ಳಲು ಪ್ರಯತ್ನಿಸಬಾರದು. ನಾವು ತೆಗೆದುಕೊಳ್ಳುವ
ಕೆಲವು ಔಷಧಿಗಳು ಡೆಂಗ್ಯೂ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.ಸೊಳ್ಳೆಗಳ ಹಾವಳಿ ಅಥವಾ
ನಿಂತಿರುವ ನೀರು ಇರುವ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಅಥವಾ ಸಮಯ ಕಳೆಯುವುದನ್ನು ತಪ್ಪಿಸಬೇಕು. ಇಂತಹ ಪ್ರದೇಶಗಳಲ್ಲಿ ಸಮಯ ಕಳೆಯುವುದರಿಂದ ಡೆಂಗ್ಯೂ
ವಾಹಕ ಸೊಳ್ಳೆಗಳಿಂದ ಕಡಿತಕ್ಕೊಳಗಾಗಿ ಅಪಾಯಕ್ಕೊಳಗಾಗಬಹುದು.
ಈ ಮೂಲಕ ಡೆಂಗ್ಯೂ ನಿಯಂತ್ರಣದಲ್ಲಿ ಎಲ್ಲರ ಸಹಕಾರ ಇದ್ದಲ್ಲಿ ಮಾತ್ರ ಈ ಮಹಾಮಾರಿಯಿಂದ ಪಾರಾಗಬಹುದು.
ಈ ಬಗ್ಗೆ ಜನರಲ್ಲಿ ಜಾಗೃತಿಯು ಮೂಡಿ ರಾಜ್ಯವು ಆದಷ್ಟು ಶೀಘ್ರ ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಮುಕ್ತವಾಗಲಿ
ಎನ್ನುವುದು ಆಶಯ.

Social Icons