Editorial: ಅನರ್ಹರ ಬಿಪಿಎಲ್ ಕಾರ್ಡು ರದ್ದಾಗಲಿ - ಸಿಎಂ ಆದೇಶ ಖಡಕ್ಕಾಗಿ ಜಾರಿಯಾಗಲಿ



ರಾಜ್ಯದಲ್ಲಿ ಬಿಪಿಎಲ್ ಕಾರ್ಡ್​ ಬಳಕೆದಾರರ ಸಂಖ್ಯೆ ಮಿತಿ ಮೀರಿದ್ದು, ಅನರ್ಹರೂ ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಹಾಗಾಗಿ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಿ ಅರ್ಹರಿಗೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಎಂದೇ ಪಡಿತರವನ್ನು ನ್ಯಾಯಬೆಲೆಯಲ್ಲಿ ಹಂಚಲಾಗುತ್ತದೆ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ರಾಜ್ಯದಲ್ಲಿ ಶೇ.80ರಷ್ಟು ಕುಟುಂಬ ಬಿಪಿಎಲ್‌ ಕಾರ್ಡುಗಳನ್ನು ಹೊಂದಿದೆ. ಇನ್ನೊಂದೆಡೆ ಹೊಸ ಬಿಪಿಎಲ್ ಕಾರ್ಡ್‌ಗಳಿಗೆ 2.95ಲಕ್ಷ ಅರ್ಜಿಗಳು ಬಾಕಿಯಿದೆ.

ಆದರೆ ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ಬಿಪಿಎಲ್ ಕಾರ್ಡುದಾರರ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು?. ಆದ್ದರಿಂದ ಬಿಪಿಎಲ್ ಕಾರ್ಡುದಾರರ ಪಟ್ಟಿಯನ್ನು ಪುನರ್‌ ಪರಿಶೀಲನೆ ಮಾಡಲು ಸಿಎಂ ಖಡಕ್‌ ಸೂಚನೆ ನೀಡಿದ್ದಾರೆ. ಆದ್ದರಿಂದ ನಿಯಮ ಮೀರಿ ಪಡೆದಿರುವ ಕಾರ್ಡ್​ಗಳನ್ನು ಡಿಲೀಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ದರಿಂದ ಶೀಘ್ರ ಅನರ್ಹರ ಕಾರ್ಡುಗಳು ರದ್ದಾಗುವ ಸಾಧ್ಯತೆಯಿದೆ. ನಿಜವಾಗಿಯೂ ಬಡತನ ರೇಖೆಗಿಂತ ಕೆಳಗಿನವರಿಗೆ ಜೀವನಮಟ್ಟ ಸುಧಾರಿಸಲು ಬಿಪಿಎಲ್ ಕಾರ್ಡ್‌ನಲ್ಲಿ ಕುಟುಂಬದ ಓರ್ವ ಸದಸ್ಯನಿಗೆ ಐದು ಕೆಜಿ ಅಕ್ಕಿ, ಉಳಿದ ಐದು ಕೆಜಿಯ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 

ಅರ್ಹರಿಗೆ ಸರಕಾರದ ಈ ಯೋಜನೆ ಸಿಕ್ಕಿದರೆ ನಿಜವಾಗಲೂ ಸಂತೋಷ. ಆದರೆ ಅನರ್ಹರೂ ಬಿಪಿಎಲ್ ಯೋಜನೆ ಪಡೆದರೆ, ಸರಕಾರದ ಹಣ ಪೋಲಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಕ್ಕೆ ಲಭ್ಯವಾಗಬೇಕಿದ್ದ ಬಿಪಿಎಲ್ ಯೋಜನೆಯನ್ನು ದುರುಪಯೋಗ ಆಗಿರುವುದಕ್ಕೆ ಫಲಾನುಭವಿಗಳು ಎಷ್ಟು ಕಾರಣವೋ ಅಧಿಕಾರಿಗಳು ಅಷ್ಟೇ ಕಾರಣ. ಕುಟುಂಬವೊಂದಕ್ಕೆ ಬಿಪಿಎಲ್ ಕಾರ್ಡು ನೀಡುವ ಮೊದಲು ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅದನ್ನು ನಡೆಸದಿದ್ದ ಫಲವೇ ಲೆಕ್ಕ ಮೀರಿ ಬಿಪಿಎಲ್ ಕಾರ್ಡುದಾರರು ರಾಜ್ಯದಲ್ಲಿರುವಂತಾಗಿದೆ. 

ಜೊತೆಗೆ ಅರ್ಹರೆಂದು ಉಳ್ಳವರೂ ಬಿಪಿಎಲ್ ಕಾರ್ಡುದಾರರಾಗಿ ಪಡಿತರ ಪಡೆದು ಅದನ್ನು ಒಂದಷ್ಟು ದರಕ್ಕೆ ಬೇರೆಯವರಿಗೆ ಮಾರುವವರೂ ಇದ್ದಾರೆ. ಅನರ್ಹ ಕಾರ್ಡು ರದ್ದತಿ ಇಂತಹ ದಂಧೆಗೆ ಬ್ರೇಕ್ ನೀಡಲಿದೆ. ಅಲ್ಲದೆ ಸರಕಾರದ ಹಣ ವ್ಯರ್ಥ ಪೋಲಾಗುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಒಟ್ಟಿನಲ್ಲಿ ಸಿಎಂ ಖಡಕ್ ಆದೇಶ ಖಡಕ್ಕಾಗಿಯೇ ಜಾರಿಯಾಗಲಿ. ಆಗಲಾದರೂ ಬಿಪಿಎಲ್ ಕಾರ್ಡು ದುರುಪಯೋಗ ಆಗುವುದಕ್ಕೆ ತಡೆಯೊಡ್ಡಿದಂತಾಗುತ್ತದೆ.