Editorial: ಸಿಎಂ ಡಿಸಿಎಂ ಗದ್ದಲ- ಸರಕಾರದ ಮೇಲೆ ಕರಿಛಾಯೆ

 


ರಾಜ್ಯ ಸರಕಾರದಲ್ಲಿ ಮತ್ತೆ ಸಿಎಂ ಡಿಸಿಎಂ ಗದ್ದಲ ಶುರುವಾಗಿದ್ದು, ಆಡಳಿತರೂಡ ಕಾಂಗ್ರೆಸ್ ನಲ್ಲಿ ಯಾವುದು ಸರಿಯಿಲ್ಲವೆಂಬುದನ್ನು ಜಗಜಾಹೀರಿ ಮಾಡಿದೆ. ಸಿಎಂ ಡಿಸಿಎಂ ಹುದ್ದೆಗಳ ಮೇಲೆ ಕಣ್ಣಿಟ್ಟು ನಡೆಯುತ್ತಿರುವ ರಾಜಕೀಯದಿಂದ  ಸರಕಾರದ ಅಭಿವೃದ್ದಿ ಚಟುವಟಿಕೆಯ ಮೇಲೆ ಕರಿ ನೆರಳು ಬಿದ್ದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಧ್ಯೆ ಉನ್ನತ ಸ್ಥಾನಕ್ಕಾಗಿ ನಡೆಯುತ್ತಿರುವ ಕದನ ಹೊಸತೇನಲ್ಲ.  ಚುನಾವಣೆಯ ಮುಂಚೆಯೆ ಇದ್ದ ಈ ಕದನ ಮೇಲ್ನೋಟಕ್ಕಷ್ಟೆ ಇತ್ತೀಚೆಗೆ ವಿರಾಮ ಕಂಡಿತ್ತು. ಸರಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ ಮತ್ತೆ ಗರಿಗೆದರಿದೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ನಿಟ್ಟಿನಲ್ಲಿ ಚುನಾವಣೆಗೆ ಮುಂಚೆಯೆ ಇಬ್ಬರ ನಡುವೆ ಕದನವೇರ್ಪಟ್ಟಿತ್ತು. ಎರಡು ನಾಯಕರ ಹಿಂಬಾಲಕರು ತಮ್ಮ ನಾಯಕರ ಪರ ಹೇಳಿಕೆಗಳನ್ನು ನೀಡುವ ಮೂಲಕ ಬಣ ರಾಜಕೀಯದ ಬಗ್ಗೆ ಬಹಿರಂಗ ಚರ್ಚೆ ನಡೆಸಿದ್ದು. ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ ಕೆ ಶಿವಕುಮಾರ್ ತಮ್ಮ ಬಣದ ಮೂಲಕ ಮುಖ್ಯಮಂತ್ರಿ ತಾನೆ ಆಗಬೇಕೆಂದು ಚರ್ಚೆಯನ್ನು ಹುಟ್ಟು ಹಾಕಿದರೂ,  ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದುಬಂದಿತ್ತು. ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿ ಪಟ್ಟಕ್ಕೆ  ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ರಾಜ್ಯ ಸರಕಅರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರ ಮುಖ್ಯಮಂತ್ರಿ ಗಾದಿಯಲ್ಲಿ ಇರುತ್ತಾರೆ ಎಂಬ ಸುದ್ದಿಗಳು ಬಂದಿದ್ದವು. ಆದರೆ ಅದನ್ನು ಯಾರೂ ಅಲ್ಲಗಲೆದಿರಲಿಲ್ಲ. ಆದರೆ ಇದೀಗ ಸರಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷಕ್ಕೆ ಮತ್ತೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ರಾಜಕೀಯ ಕದನ ಏರ್ಪಟ್ಟಿದೆ.

ಡಿಸಿಎಂ ಆಗಿ ಮುಖ್ಯಮಂತ್ರಿಯಷ್ಟೆ ಪ್ರಭಾವ ಬೀರುತ್ತಿರುವ ಡಿ ಕೆ ಶಿವಕುಮಾರ್ ರನ್ನು ಮಣಿಸಲು ಮೂರು ಡಿಸಿಎಂ ಸೃಷ್ಟಿಸುವ ಪ್ರಸ್ತಾಪ ಸಿದ್ರಾಮಯ್ಯ ಬಣದ ಕಡೆಯಿಂದ ಬಂದರೆ, ಮುಖ್ಯಮಂತ್ರಿಗಳನ್ನೆ ಬದಲಿಸುವ ಪ್ರಸ್ತಾಪ ಸ್ವಾಮೀಜಿಗಳ ಕಡೆಯಿಂದ ಬಂದಿದೆ. ಇದೀಗ ಈ ಬಣ ರಾಜಕೀಯಕ್ಕೆ ಸ್ವಾಮೀಜಿಗಳ, ಜಾತಿ ಸಂಘಗಳ ಪ್ರವೇಶವೂ ಆಗಿದೆ.

 ಸಿಎಂ ಡಿಸಿಎಂ ಕದನದ ನಡುವೆ ಡಿ ಕೆ ಶಿವಕುಮಾರ್ ಅವರ ಬಳಿಯಿರುವ ಕೆಪಿಸಿಸಿ ಅಧ್ಯಕ್ಷ ಪಟ್ಟ ತಪ್ಪಿಸಲು ಕಸರತ್ತುಗಳು ಆರಂಭವಾಗಿದೆ. ಎಐಸಿಸಿ ಅಧ್ಯಕ್ಷರಿಗೆ ಆಪ್ತರಾಗಿರುವ ಡಿ ಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ತಪ್ಪಲಾರದು ಎಂಬ ವಿಶ್ವಾಸವಿದೆ.

 ಆದರೆ ಅಧಿಕಾರರೂಡ ಪಕ್ಷದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಸರಕಾರದ ಮಟ್ಟಿಗೆ ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದ ಅಭಿವೃದ್ದಿ ವಿಚಾರದ ಚರ್ಚೆಗಳು ಮಾಡುವ ಸಮಯದಲ್ಲಿ ಬಣ ರಾಜಕೀಯದ ಚರ್ಚೆಗಳು ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಅಬೀವೃದ್ದಿಯ ಮೇಲೆ ಕರಿಛಾಯೆ ಬಿದ್ದಂತಾಗುತ್ತದೆ. ಜನರು ತೀರ್ಪು ಕೊಟ್ಟು ಪೂರ್ಣ ಬಹುಮತದಿಂದ ಅಧಿಕಾರಕ್ಕೇರಿಸಿದ ಋಣವನ್ನು ಕಾಂಗ್ರೆಸ್ ಪಕ್ಷ ತೀರಿಸಬೇಕಾಗಿದೆ.