EDITORIAL | ನೀಟ್ ಅಕ್ರಮಗಳು: ವಿದ್ಯಾರ್ಥಿಗಳ ಆತಂಕ ಪ್ರತಿಭಟನೆ, ಸಂಸತ್ತಿನಲ್ಲಿ ಸರ್ಕಾರದ ಮೌನ
ದೇಶವೇ ತಲೆ ತಗ್ಗಿಸುವಂತೆ ನೀಟ್ ಪರೀಕ್ಷಾ ಅಕ್ರಮಗಳು ನಡೆದಿವೆ. ಇದು ಕೇವಲ ಒಂದು ಪ್ರಶ್ನೆ ಪತ್ರಿಕೆಯ ಲೀಕ್ ಅಲ್ಲ. ಇದು 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ.
ನೀಟ್ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ. ಸಿಬಿಐ ತನಿಖೆಯ ಪ್ರಗತಿ ಏನು..? ಪರೀಕ್ಷಾ ಪ್ರಾಧಿಕಾರ ಮತ್ತೆ ಪರೀಕ್ಷೆ ನಡೆಸಲಿದೆಯೇ..? ಇಲ್ಲ, ಅಕ್ರಮ ನಡೆದಿದ್ದರೂ ಅದೇ ಫಲಿತಾಂಶದೊಂದಿಗೆ ಮುಂದುವರಿಯಲಿದೆಯೇ..?
ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಲ್ಲವೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉತ್ತರ ನೀಡಬೇಕು. ಆದರೆ, ಸಂಸತ್ತಿನಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸಹಿತ ಪ್ರತಿಪಕ್ಷ ನಾಯಕರು ಈ ಪ್ರಶ್ನೆಗಳನ್ನು ಗಂಭೀರವಾಗಿ ಎತ್ತಿದಾಗ ಅವರ ಮೈಕ್‌ಗಳನ್ನು ಆಫ್ ಮಾಡುವ ಮೂಲಕ ಸಭಾಧ್ಯಕ್ಷರು ತಮ್ಮ ಕೀಳುಮಟ್ಟವನ್ನು ತೋರಿಸಿದರು.
ಕೇಂದ್ರ ಸರ್ಕಾರವೂ ಈ ವಿಷಯದಲ್ಲಿ ಚರ್ಚೆಗೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಈ ಮೂಲಕ ಯುವಜನತೆ ಪ್ರಶ್ನೆಗಳು ಉತ್ತರವಿಲ್ಲದ ಒಗಟುಗಳಾಗಿಯೇ ಮುಂದುವರಿಯಿತು.
ಒಂದೇ ಪರೀಕ್ಷಾ ಕೋಣೆಯೊಳಗೆ ಅರ್ಧಕ್ಕೂ ಹೆಚ್ಚು ಜನ ನೂರು ಪ್ರತಿಶತಃ ಫಲಿತಾಂಶ ಹೇಗೆ ಪಡೆದರು. ಈ ಬಗ್ಗೆ ಯಾವುದೇ ಉತ್ತರವಿಲ್ಲ. ಪರೀಕ್ಷಾ ಪ್ರಾಧಿಕಾರದಲ್ಲಿ ವ್ಯಾಪಕ ಅಕ್ರಮ ನಡೆದಿದ್ದರೂ ಅದರ ಸಿಬ್ಬಂದಿಯನ್ನು ಸಿಬಿಐ ವಿಚಾರಣೆ ನಡೆಸಿದೆಯೇ..?
ಪೇಪರ್ ಲೀಕ್‌ಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಬಂಧನಕ್ಕೊಳಗಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಮಿತ್ರ ಪಕ್ಷದ ಶಾಸಕನ ಪಾತ್ರ ನೀಟ್ ಅಕ್ರಮದಲ್ಲಿ ಇದೆಯೇ..? ಈ ಎಲ್ಲದ್ದಕ್ಕೂ ಯಾವುದೇ ಉತ್ತರ ಸಿಕ್ಕಿಲ್ಲ.
ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ವಿದ್ಯಾರ್ಥಿ ನಾಯಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದ್ದ ಮೋದಿಯವರೇ ಇದಕ್ಕೆ ಉತ್ತರ ಕೊಡುಬೇಕು. ಆದರೆ, ಇದಕ್ಕೆ ವಿಶ್ವಗುರು ಉತ್ತರ ಕೊಡುತ್ತಾರೆಯೇ..? ಸಂಸತ್ತು ಕೂಡ ಇದನ್ನೇ ಕೇಳುತ್ತಿದೆ. ಪಲಾಯನವಾದ ಬೇಡ.
ದಯವಿಟ್ಟು, ಇದು ನವಪೀಳಿಗೆಯ ಭವಿಷ್ಯದ ಪ್ರಶ್ನೆ. ಜನ ಉತ್ತರ ಬಯಸಿದ್ದಾರೆ.
Social Icons