ಭಾರತದ ಶ್ರೀಮಂತರ ಪೈಕಿ ಅಗ್ರಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ನಡೆದದ್ದು ಕೇವಲ 5,000 ಕೋಟಿಯಲ್ಲಿ. ಈ ವಿವಾಹ ಈ ಶತಮಾನದ ಅತ್ಯಂತ ವೈಭವೋಪೇತ ಮದುವೆ ಎಂಬ ಹೆಗ್ಗಳಿಗೂ ಪಾತ್ರವಾಗಿದೆ. ವರ್ಷದಿಂದ ಈ ಮದುವೆಗೆ ಸಿದ್ಧತೆ ನಡೆಯಿತು. ಇಡೀ ವಿಶ್ವವೇ ಈ ಮದುವೆಯನ್ನು ಬೆರುಗುಗಣ್ಣಿನಿಂದ ಗಮನಿಸಿತು. ಪ್ರೀ ವೆಡ್ಡಿಂಗ್ ಅಂಥಾನೇ ಸಾಕಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯಿತು. ಅದಕ್ಕೆ ಸಾವಿರಾರು ಕೋಟಿ ಖರ್ಚು ಮಾಡಲಾಯಿತು. ಈ ಪ್ರೀ ವೆಡ್ಡಿಂಗ್‌ಗೆ ಬಾಲಿವುಡ್ ನಟ-ನಟಿಯರು ಬಂದು ಹೆಜ್ಜೆ ಹಾಕಿದರು. ಕುಣಿದು ಕುಪ್ಪಳಿಸಿದರು.
ಇನ್ನು ಮೊನ್ನೆ ತಾನೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶ್ವದ ಭಾರಿ ಶ್ರೀಮಂತ ಉದ್ಯಮಿಗಳಲ್ಲೋರ್ವ ರಿಲಯನ್ಸ್ ಉದ್ಯಮ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಪುತ್ರನಿಗೆ ಮಗಳನ್ನು ನೀಡಿ ಕನ್ಯಾದಾನ ಮಾಡಿದ್ದು, ಔಷಧಿ ಉದ್ಯಮದ ದಿಗ್ಗಜ ವೀರೇನ್ ಮರ್ಚಂಟ್. ಈ ಮದುವೆಯಂಥೂ ಇಡೀ ದೇಶವೇ ಬೆರಗಾಗುವಂತೆ, ವಿಶ್ವವೇ ಒಮ್ಮೆ ಹಿಂದೆ ತಿರುಗಿ ನೋಡುವಂತೆ ನಡೆದಿರುವ ಮದುವೆ.
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹ ನಡೆಯಬೇಕೆಂದು ಉಪದೇಶಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ರಾಜಕಾರಣಿಗಳು. ಅಲ್ಲಿ ಸರಳ ವಿವಾಹದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾರೆ. ಅಂಥವರೇ ಅಂಬಾನಿ ಪುತ್ರನ ಮದುವೆಗೆ ಹೋಗಿ ಗಡದ್ದಾಗಿ ತಿಂದು ತೇಗಿ ಬಂದಿದ್ದಾರೆ. ಜೊತೆಗೆ ತಾವೂ ಅಂಬಾನಿಗೆ ಗಳಸ್ಯಕಂಠಸ್ಯರು ಎಂದು ಜಗತ್ತಿಗೆ ತೋರ್ಪಡಿಸಿ ಬಂದದ್ದೂ ಆಯಿತು.
ಇನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್‌ನ ತಾರೆಯರೂ ಈ ವಿವಾಹದ ಪ್ರಮುಖ ಆಕರ್ಷಣೆಯಾಗಿದ್ದರು. ಖ್ಯಾತ ಬಾಲಿವುಡ್ ತಾರೆಯರು, ಕ್ರೀಡಾ ಜಗತ್ತಿನ ಪ್ರಮುಖರು, ಉದ್ಯಮಗಳ ದಿಗ್ಗಜರು ಆರತಕ್ಷತೆ ಹಾಗೂ ಮದುವೆಗೆ ಹೋಗಿ ಕೋಟಿ ಬೆಲೆಯ ಉಡುಗೊರೆ ಪಡೆದು ಮರಳಿದ್ದಾರೆ. ಆದರೆ ಕೋಟಿ ಕುಳಗಳಿಗೆ ಹೊರತುಪಡಿಸಿ ನಮ್ಮ ನಿಮ್ಮಂಥ ಜನಸಾಮಾನ್ಯರಿಗೆ, ಮದುವೆ ಸಮಾರಂಭ ನಡೆದ ಮುಂಬೈದ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್ ಬಳಿಗೆ ಹೋಗಲು ಅವಕಾಶವೇ ಇರಲಿಲ್ಲ. ಯಾಕೆಂದರೆ ನಾವು ನೀವೆಲ್ಲ ಸೆಲೆಬ್ರೆಟಿಗಳು ಅಲ್ವಲ್ಲ?. ಆದರೆ ಮದುವೆಗಾಗಿ ನಾವೇ ಉಡುಗೊರೆ ವೆಚ್ಚವನ್ನು ಭರಿಸುತ್ತಿದ್ದೇವೆ. ಹೌದು ಜುಲೈ 4ರಿಂದ ಜಿಯೋ ಡಾಟ ಬೆಲೆಯನ್ನು ಹೆಚ್ಚಿಸಿ ಅಂಬಾನಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಆರಂಭಿಸಿದ್ದಾರೆ. ಪುತ್ರನ ಮದುವೆಯ 5 ಸಾವಿರ ಕೋಟಿ ಖರ್ಚು ನಿಭಾಯಿಸಲು ಮುಕೇಶ್ ಅಂಬಾನಿ ಜಿಯೋ ಬೆಲೆ ಹೆಚ್ಚಿಸಿ ಸರಿದೂಗಿಸುತ್ತಿದ್ದಾರೆ ಎಂದು ದೇಶದ ಜನರು ಆಡಿಕೊಳ್ಳಲು ಶುರು ಮಾಡಿದ್ದಾರೆ.
ಅವರೇನೋ ತಮ್ಮ ಪುತ್ರನ ಮದುವೆಗೆ ಖರ್ಚು ಮಾಡಿದರೆ ಇವರೇಕೆ ಮೈಮೇಲೆ ಇರುವೆ ಬಿಟ್ಟವರಂತೆ ಆಡುತ್ತಾರೆ. ಅಂಬಾನಿಯೂ ತಮ್ಮ ಪುತ್ರನ ಮದುವೆಯೊಂದಿಗೆ ಸಾವಿರಾರು ಬಡಕುಟುಂಬಗಳ ವಧು ವರರ ವಿವಾಹ ಮಾಡಿಸಿ ಅವರಿಗೆ ತಲಾ ಒಂದು ಲಕ್ಷ ಉಡುಗೊರೆ ಕೊಟ್ಟಿದ್ದಾರಲ್ವಾ?. ಇನ್ನೇನು ಮಾಡಬೇಕು ಎಂದು ಯಾರದರೂ ಹೇಳಬಹುದು. ಅವರ ಹಣದಲ್ಲಿ ಅದ್ದೂರಿ ವಿವಾಹ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಇಡೀ ದೇಶದ ಹೆಚ್ಚಿನ ರಾಜ್ಯಗಳು ಮಹಾಮಳೆಗೆ ತತ್ತರಿಸುತ್ತಿದೆ. ಮಳೆ-ನೆರೆಗೆ ಸಿಕ್ಕಿ ಹಲವಾರು ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಬೀದಿ ಪಾಲಾಗಿದ್ದಾರೆ. ಅನ್ನ-ಆಶ್ರಯಕ್ಕೆ ಮತ್ತೊಬ್ಬರ ಮುಂದೆ ಕೈಚಾಚುವ ಪರಿಸ್ಥಿತಿಯಲ್ಲಿದ್ದಾರೆ. ದೇಶದಲ್ಲಿ ಕೋಟ್ಯಾಂತರ ಮಂದಿ ಹೊಟ್ಟೆಗಿಲ್ಲದೆ ತತ್ತರಿಸುತ್ತಿರುವಾಗ, ಅವರಿಗೆ ಹೊಟ್ಟೆಕಿಚ್ಚಾಗುವಂತೆ ಮದುವೆಯಾಗೋದು ಎಷ್ಟು ಸರಿ ಅನ್ನೋದಷ್ಟೇ ನಮ್ಮ ಪ್ರಶ್ನೆ.

Social Icons