EDITORIAL ಉತ್ತಮ ವೈದ್ಯರು ಬೇಕು, ಪರಿಣಾಮಕಾರಿ ವೈದ್ಯಕೀಯ ಶಿಕ್ಷಣ ಏಕೆ ಬೇಕಿಲ್ಲ?

EDITORIAL ಉತ್ತಮ ವೈದ್ಯರು ಬೇಕು, ಪರಿಣಾಮಕಾರಿ ವೈದ್ಯಕೀಯ ಶಿಕ್ಷಣ ಏಕೆ ಬೇಕಿಲ್ಲ?





ವೈದ್ಯಕೀಯ ಶಿಕ್ಷಣ ವ್ಯವಸ್ಥೆ ತೀವ್ರವಾಗಿ ಹದಗೆಟ್ಟು ಹೋಗಿದೆ. ಇದಕ್ಕೆ ಕನ್ನಡಿ ಹಿಡಿದಂತೆ ನೀಟ್ (NEET) ಪರೀಕ್ಷಾ ಅಕ್ರಮ ನಮ್ಮ ಕಣ್ಣ ಮುಂದಿದೆ. ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯಲ್ಲೇ ಮೋಸ ಹಾಗೂ ಅಕ್ರಮ ನಡೆಯುತ್ತಿದೆ. ಇದು ಸಾರ್ವಕಾಲಿಕ ಸತ್ಯ. ಮೆಡಿಕಲ್ ಸೀಟ್ ಅನ್ನುವುದು ಭ್ರಷ್ಟಾಚಾರದ ಮಹಾ ಹೆಮ್ಮರವಾಗಿ ಬೆಳೆದಿದೆ.


ಈ ವ್ಯವಸ್ಥೆಗೆ ಸುಧಾರಣೆ ತರಲು ಬಯಸಿಯೇ NEET ಎಂಬ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. 2019ರಿಂದೀಚೆಗೆ ಜಾರಿಗೆ ಬಂದ ಈ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಲ್ಲೇ ಏಕಾಧಿಪತ್ಯ. ಆದರೆ, ಇದರ ಹುಳುಕು ಒಂದೇ ವರ್ಷದಲ್ಲಿ ಬಟಾಬಯಲಾಗಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಪಾವಿತ್ರ್ಯ ನಷ್ಟವಾಗಿದೆ ಎಂಬುದನ್ನು ಸ್ವತಃ ಈ ಹಗರಣದ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ನ್ಯಾಯಪೀಠವೇ ಹೇಳಿದೆ.


ನಮ್ಮ ವೈದ್ಯಕೀಯ ವ್ಯವಸ್ಥೆ ಪರಿಶುದ್ಧವಾಗಿರಬೇಕು. ನಮ್ಮ ಉತ್ತಮ ವೈದ್ಯರು ಬೇಕು. ಆದರೆ, ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ಬೇಡ ಎಂದರೆ ಹೇಗೆ..? ಈ ಕಾರಣಕ್ಕಾಗಿಯೇ ವೈದ್ಯಕೀಯ ಸೀಟು ಹಂಚಿಕೆಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಇರಬೇಕೆ..? ಬೇಡವೇ ಎಂಬ ಚರ್ಚೆ ಆರಂಭವಾಗಿದೆ.


ವೈದ್ಯಕೀಯ ಶಿಕ್ಷಣದ ಉದ್ಧಾರಕ್ಕೆ ಎರಡು ಹಂತದ ಪರೀಕ್ಷಾ ಕ್ರಮ ಇರಬೇಕು ಎಂಬ ಮಾತು ಬಲವಾಗಿ ಕೇಳಿಬಂದಿದೆ. ಐಐಟಿಗಳಲ್ಲಿ ಎಂಜಿನಿಯರಿಂಗ್ ಸೀಟ್‌ಗಳಿಗೆ ಎರಡು ಹಂತಗಳ ಪರೀಕ್ಷೆ ಇದೆ. ಮೊದಲ ಹಂತದಲ್ಲಿ ಉತ್ತಮ ಅಂಕ ಗಳಿಸಿದವರಷ್ಟೇ ಅಂತಿಮ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ಕೇಂದ್ರ ಮಟ್ಟದ ವೈದ್ಯಕೀಯ ಸೀಟುಗಳ ಪರೀಕ್ಷೆಗೂ ಇದೇ ಮಾದರಿಯನ್ನು ಬಳಸಿಕೊಳ್ಳಬೇಕು.


ಸುಮಾರು ಒಂದು ಲಕ್ಷದಷ್ಟಿರುವ MBBS ಸೀಟುಗಳಿಗೆ 24 ಲಕ್ಷ ವಿದ್ಯಾರ್ಥಿಗಳು ಒಂದೇ ಒಂದು ಪರೀಕ್ಷೆ ಬರೆಯುವ ಅಗತ್ಯವೇಕೆ..? ಈ ಪರೀಕ್ಷೆಗಳಲ್ಲಿ ಈ ಮೊದಲು ಇದ್ದಂತಹ ಕನಿಷ್ಟ ಶೇ. 50 ಅಂಕಗಳ ಮಾನದಂಡವನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇದನ್ನು ಕೆಳಗಿಳಿಸಿ ಕೇವಲ ಹಣಕ್ಕಾಗಿ ಸೊನ್ನೆಗೆ ತಂದಿಡುವುದಕ್ಕೆ ಅವಕಾಶ ಇರಕೂಡದು.


ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಮಾನದಂಡವನ್ನು ಪೂರೈಸುವ ವಿದ್ಯಾರ್ಥಿಗಳು ಸಿಗದಿದ್ದರೆ ಬಾಕಿ ಉಳಿಯುವ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಮರಳಿಸಿ ಎಲ್ಲ ಸಾಂವಿಧಾನಿಕ ಮೀಸಲಾತಿ ಅನುಸಾರ ಆ ಸೀಟುಗಳ ಹಂಚಿಕೆ ನಡೆಯುವಂತಾಗಬೇಕು. ಆಗ ಮಾತ್ರ ವೈದ್ಯಕೀಯ ಶಿಕ್ಷಣದ ಮೌಲ್ಯೀಕರಣಗೊಳ್ಳಲಿದ್ದು, ಸಮಾಜಕ್ಕೆ ಉತ್ತಮ ವೈದ್ಯರು ಸೃಷ್ಟಿಯಾಗಿ ವೈದ್ಯಕೀಯ ಸೇವೆ ಉತ್ತಮ ಗೊಳ್ಳಬಹುದು.

ಈಗ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ ಕೇವಲ ಪಿಯುಸಿ ಅಂಕಗಳ ಆಧಾರದಲ್ಲಿ ಸೀಟು ಕೊಡಲು ಹೊರಟರೆ ಮತ್ತೆ 80ರ ದಶಕದ ಮೋಸಗಳತ್ತ ಹೋದಂತಾಗುತ್ತದೆ. ನಮಗೆ ಉತ್ತಮ ವೈದ್ಯರು ಬೇಕು ಎಂದಾದರೆ, ವೈದ್ಯಕೀಯ ಶಿಕ್ಷಣ ಪ್ರತಿಭಾವಂತರಿಗಷ್ಟೇ ದಕ್ಕಬೇಕು. ಅದಕ್ಕೆ ಅತ್ಯಂತ ಕಠಿಣವಾದ ಪಾರದರ್ಶಕವಾದ ಪರೀಕ್ಷೆಗಳ ವ್ಯವಸ್ಥೆ ಇರಬೇಕು. ಮತ್ತು ಅದಕ್ಕೂ ಹೆಚ್ಚಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಹಣದ ಪಾರಮ್ಯಕ್ಕೆ ಬ್ರೇಕ್ ಬೀಳಬೇಕು.