Editorial| ಲಾಬಿಗೆ ಮಣಿಯದೆ ಜಾರಿಯಾಗಲಿ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024

ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಪ್ರಮುಖ ಔದ್ಯೋಗಿಕ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024’ ಅನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲು ಮುಂದಾಗಿದೆ. ಇದರಿಂದ ತಮ್ಮದೇ ನೆಲದಲ್ಲಿ ಉದ್ಯೋಗದಿಂದ ವಂಚಿತರಾಗುತ್ತಿದ್ದ ಕನ್ನಡಿಗರಿಗೆ ಅನುಕೂಲ ಆಗಲಿದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಸಿಕ್ಕಿದ್ದು, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ, ರಾಜ್ಯಪಾಲರ ಅಂಕಿತ ಬಿದ್ದರೆ ಮಸೂದೆ ಶೀಘ್ರದಲ್ಲೇ ಕಾನೂನು ಆಗಿ ಜಾರಿಗೆ ಬರಲಿದೆ. ಈ ಮಸೂದೆಗೆ ಉದ್ಯಮಿಗಳ ವಿರೋಧ ಕೂಡ ವ್ಯಕ್ತವಾಗುತ್ತಿದೆ.



ಈ ಮಸೂದೆ ಅಂಗೀಕಾರಗೊಂಡರೆ ಕರ್ನಾಟಕದಲ್ಲಿ ಖಾಸಗಿ ವಲಯದ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50 ರಿಂದ ಶೇ.75ರವರೆಗೆ ಮೀಸಲಾತಿ ನೀಡಬೇಕು. ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಶೇ.50ರಷ್ಟು, ನಾನ್‌ ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ಸಿಗಲಿದೆ. ಇನ್ನು, ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಬಳಿಕ ಆ ಪೋಸ್ಟ್‌ ಅನ್ನು ಸಿದ್ದರಾಮಯ್ಯ ಅವರು ಅಳಿಸಿ ಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತನಾಡಲು, ಓದಲು ಹಾಗೂ ಬರೆಯಲು ಬರುವವರಿಗೆ ಮೀಸಲಾತಿ ಸಿಗಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಅಭ್ಯಸಿಸದವರು ನೋಡಲ್‌ ಏಜೆನ್ಸಿಗಳು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಅಂತವರಿಗೆ ಮಾತ್ರ ಈ ಮೀಸಲಾತಿ ಸಿಗಲಿದೆ. ಈ ಕನ್ನಡ ಭಾಷಾ ಪರೀಕ್ಷೆ ಕೂಡ 10ನೇ ತರಗತಿಯ ಮಟ್ಟದಲ್ಲಿರಲಿದೆ. ಇನ್ನು, ಖಾಸಗಿ ವಲಯದಲ್ಲಿ ಹುದ್ದೆಗೆ ಅರ್ಹ ಹಾಗೂ ಸೂಕ್ತ ಎನಿಸುವ ಅಭ್ಯರ್ಥಿ ಸಿಗದಿದ್ದರೆ ಕಂಪನಿಗಳು, ಕೈಗಾರಿಕೆಗಳು ಸರ್ಕಾರ ಅಥವಾ ಇತರೆ ಸಂಸ್ಥೆಗಳ ಜೊತೆ ಕೈ ಜೋಡಿಸಿ ಸ್ಥಳೀಯ ಅಭ್ಯರ್ಥಿಗೆ ಮೂರು ವರ್ಷದೊಳಗೆ ಕೆಲಸಕ್ಕೆ ಅಗತ್ಯವಾಗುವ ತರಬೇತಿಯನ್ನು ನೀಡಿ ಅವರನ್ನೇ ಹುದ್ದೆಯಲ್ಲಿ ಮುಂದುವರಿಸಬೇಕು ಎಂಬ ಅಂಶ ಕೂಡ ಮಸೂದೆಯಲ್ಲಿದೆ. ಅದು ಆಗದಿದ್ದಾಗ ಅಥವಾ ಯಾವುದೇ ಸ್ಥಳೀಯ ಅಭ್ಯರ್ಥಿ ಆ ಹುದ್ದೆಗೆ ಅರ್ಹನಾಗಿರದಿದ್ದರೆ ಕಂಪನಿಗಳು ಮೀಸಲಾತಿಯ ವಿನಾಯಿತಿಗಾಗಿ ಸೂಕ್ತ ದಾಖಲೆಗಳೊಂದಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಅದಾದ ಬಳಿಕ ಸರ್ಕಾರ ಸೂಕ್ತ ವಿಚಾರಣೆ ನಡೆಸಿ ಮ್ಯಾನೇಜ್‌ಮೆಂಟ್‌ ಪೋಸ್ಟ್‌ಗಳಲ್ಲಿ ಶೇ.25 ರಷ್ಟು ಹಾಗೂ ನಾನ್‌ ಮ್ಯಾನೇಜ್‌ಮೆಂಟ್‌ ಪೋಸ್ಟ್‌ಗಳಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಕಡಿತಗೊಳಿಸಬಹುದು ಎಂದು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಉದ್ಯೋಗ ಮೀಸಲಾತಿಯ ಕಾನೂನನ್ನು ಕಂಪನಿಗಳು ಉಲ್ಲಂಘಿಸಿದರೆ ಕಂಪನಿಗಳಿಗೆ ಭಾರೀ ಮೊತ್ತದ ದಂಡವನ್ನು ವಿಧಿಸುವ ಆಯ್ಕೆ ಕೂಡ ಸರ್ಕಾರಕ್ಕಿದೆ.

 ಎಲ್ಲರಿಗೂ ನಮ್ಮ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿರುವ ಕನ್ನಡಿಗರೇ ಉದ್ಯೋಗಾವಕಾಶಗಳಿಂದ ವಂಚತರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಉದ್ಯೋಗ ಮೀಸಲಾತಿ ಮಸೂದೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಆದರೆ, ಈ ಮಸೂದೆಗೆ ಉದ್ಯಮಿಗಳು ಹಾಗೂ ಕೈಗಾರಿಕೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ. ಜೊತೆಗೆ ಲಾಬಿಗಳೂ ನಡೆಯುವ ಸಾಧ್ಯತೆಗಳಿವೆ. ಆದರೆ ಇವೆಲ್ಲವನ್ನೂ ಮೀರಿನಿಂತು ಸಿದ್ದರಾಮಯ್ಯರ ಸರಕಾರ ದಕ್ಷತೆ ಮೆರೆಯಲಿ, ಕನ್ನಡಿಗರ ಪರವಾಗಿ ನಿಲ್ಲಲಿ ಎನ್ನುವುದು ಆಶಯ.