ಅಯೋಧ್ಯೆ ಬಳಿಕ ಬದ್ರೀನಾಥದಲ್ಲೂ ಸೋಲು: ಉಪ ಚುನಾವಣೆ ಬಳಿಕ ಬಿಜೆಪಿ ಆತ್ಮಾವಲೋಕನಕ್ಕೆ ಸಕಾಲ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿತ್ತು. ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾದದ್ದು ಅಯೋಧ್ಯೆಯಲ್ಲಿ ಬಿಜೆಪಿಯ ಸೋಲು. ಜನವರಿಯಲ್ಲಿ ಅದ್ಭುತ ಸೌಂದರ್ಯದಿಂದ ಹೊಳೆಯುವ ರಾಮಮಂದಿರದ ಲೋಕಾರ್ಪಣೆ ಮೋದಿ ಸರ್ಕಾರದ ಬಹುದೊಡ್ಡ ಸಾಧನೆ ಎಂಬಂತೆ ಪ್ರಚಾರ ಮಾಡಲಾಯಿತು. ಆ ಬಳಿಕ ಕೆಲವೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಅಯೋಧ್ಯೆಯಲ್ಲಿ ಹಿನ್ನಡೆಯಾಯಿತು.
ಇದೀಗ ಉಪ ಚುನಾವಣೆಯಲ್ಲೂ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಿದೆ. 7 ರಾಜ್ಯಗಳ 13 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 10 ಸ್ಥಾನಗಳಲ್ಲಿ ಗೆದ್ದುಕೊಂಡಿದ್ದು, ಬಿಜೆಪಿ 2 ಸ್ಥಾನದಲ್ಲಿ ಜಯ ಸಾಧಿಸಿದೆ.
ಈ ಪೈಕಿ, ಉತ್ತರಾಖಂಡದ ಬದರೀನಾಥ ಕ್ಷೇತ್ರದಲ್ಲಿ ಬಿಜೆಪಿಯ ಸೋಲು ಅರಗಿಸಿಕೊಳ್ಳಲಾಗದ ಹಿನ್ನಡೆ. 9 ಸತತ ಜಯಗಳ ಬಳಿಕ ಕಮಲ ಪಕ್ಷ ಸೋಲು ಕಂಡಿದೆ. ಹಿಂದುತ್ವದ ಭದ್ರ ನೆಲೆಯಲ್ಲೂ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬುದನ್ನು ಕಾಂಗ್ರೆಸ್ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಫಲಿತಾಂಶ ನಿಜಕ್ಕೂ ಬಿಜೆಪಿಯನ್ನು ಕಂಗೆಡಿಸಬಹುದು.
ಹಿಮಾಚಲ ಪ್ರದೇಶದ ಜನರೂ ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿಲ್ಲ. ಆಪರೇಷನ್ ಕಮಲದ ಮೂಲಕ ಕೈ ಪಕ್ಷದ ಶಾಸಕರನ್ನು ಸೆಳೆದು ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡಲು ಬಿಜೆಪಿ ಪ್ರಯತ್ನ ಮಾಡಿತ್ತು. ಅಲ್ಲಿ ಜನ ಮತ್ತೆ ಆಡಳಿತಾರೂಢ ಪಕ್ಷಕ್ಕೆ ಬಲ ತುಂಬಿದ್ದಾರೆ. ಹಿಮಾಚಲದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎರಡಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಪಾಳಯ ಸೇರಿದ್ದ ಮಾಜಿ ಕಾಂಗ್ರೆಸ್ ಶಾಸಕರು ಸೋತು ಮನೆಗೆ ತೆರಳಿದ್ದಾರೆ. ಕಾಂಗ್ರೆಸ್ ಸರ್ಕಾರ ಭದ್ರತೆಯ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ.
ಆದರೆ, ಅಪವಾದ ಎಂಬಂತೆ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿದ್ದ ಕಮಲೇಶ್ ಪ್ರತಾಪ್ ಶಾ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿಗೆ ಜನ ಮಣೆ ಹಾಕಿದ್ದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರತಿನಿಧಿಸಿದ್ದ ಮೂರು ಕ್ಷೇತ್ರಗಳು ತೃಣಮೂಲದ ಪಾಲಾಗಿದೆ. 25 ವರ್ಷದ ಕಿರಿಯ ಮಧುಪರ್ಣ ಠಾಕೂರ್ ಗೆದ್ದು ಶಾಸಕರಾಗಿದ್ದಾರೆ.
ಒಟ್ಟಿನಲ್ಲಿ ಈ ಚುನಾವಣೆ ಪ್ರತಿಪಕ್ಷಗಳ ಮನೋಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಬರೆದಿಟ್ಟುಕೊಳ್ಳಿ ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಲೋಕಸಭೆಯಲ್ಲಿ ಗುಡುಗಿದ್ದ ರಾಹುಲ್ ಗಾಂಧಿ ಅವರ ಮಾತುಗಳು ನಿಜವಾಗುತ್ತದೆಯೋ ಅಥವಾ ಬಿಜೆಪಿಯ ಭದ್ರಕೋಟೆ ಕಲ್ಲುಬಂಡೆಯಂತೆ ಉಳಿಯುತ್ತದೆಯೋ ಎಂಬುದು ಕಾದುನೋಡಬೇಕಿದೆ.
ಬಿಜೆಪಿಗೆ ಈ ಚುನಾವಣಾ ಫಲಿತಾಂಶ ಒಂದು ಆತ್ಮಾವಲೋಕನಕ್ಕೆ ದಾರಿಯಾಗಿದೆ. ಜನ ಮನಸ್ಸನ್ನು ಗೆಲ್ಲಲು ಅಭಿವೃದ್ಧಿಯೇ ಮೂಲಮಂತ್ರ. ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುವುದರಿಂದ ಹೊಟ್ಟೆಯ ಹಸಿವು ಇಂಗುವುದಿಲ್ಲ. ನಿರುದ್ಯೋಗ, ಬೆಲೆ ಏರಿಕೆಗೆ ಮದ್ದು ಅರೆಯದಿದ್ದರೆ ಜನರು ಮತದಾನದಲ್ಲಿ ಪಾಠ ಕಲಿಸುತ್ತಾರೆ.
ನೀಟ್ ಅಕ್ರಮಗಳು, ಕುಸಿತ ಕಂಡ ಸಾಲು ಸಾಲು ಸೇತುವೆಗಳು, ಹೈರಾಣಾದ ಜನ ಸಾಮಾನ್ಯನಿಗೆ ಅಂಬಾನಿ ಕುಟುಂಬದ ವೈಭವೋಪೇತ ಮದುವೆ ರಂಗುತರಿಸುವುದಿಲ್ಲ ಎಂಬುದು ಅಷ್ಟೇ ಕಟು ಸತ್ಯ.
Social Icons