ಕಳ್ಳತನದಲ್ಲೂ Creativity| ಮನೆಗೆ ನುಗ್ಗಿ ಪಕೋಡ ತಯಾರಿಸಿ ತಿಂದು ಚಿನ್ನಾಭರಣ ದೋಚಿದ ಕಳ್ಳರ ಗ್ಯಾಂಗ್!

ನೋಯ್ಡಾ: ದೇಶದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಹಿಂದೆಲ್ಲಾ ನೇರವಾಗಿ ಮನೆಗೆ ನುಗ್ಗಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರು ಇದೀಗ ಒಂದಷ್ಟು ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಇದೀಗ ಪಕೋಡ ಕಳ್ಳರ ಗ್ಯಾಂಗ್ ಸರದಿ. ಈ ಗ್ಯಾಂಗ್ ಮನೆಗೆ ನುಗ್ಗಿ ಮೊದಲು ಅಡುಗೆ ಕೋಣೆಗೆ ತೆರಳಿ ಪಕೋಡ ಸೇರಿದಂತೆ ಇನ್ನಿತರ ತಿಂಡಿ ತಯಾರಿಸಿ ತಿಂದು ಬಳಿಕ ದೋಚುವ ಪದ್ದತಿ ರೂಡಿಸಿಕೊಂಡಿದೆ. ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 25ರಲ್ಲಿ ಈ ಗ್ಯಾಂಗ್ ಬರೋಬ್ಬರಿ 3 ಲಕ್ಷ ರೂಪಾಯಿ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದೆ.



ಈ ಗ್ಯಾಂಗ್ ರಾತ್ರಿ ವೇಳೆ ಕೆಲ ಮನೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ಪ್ರಮುಖವಾಗಿ ವಾರಾಂತ್ಯದಲ್ಲೇ ಪ್ರವಾಸ ಅಥವಾ ತುರ್ತು ಅಗತ್ಯಕ್ಕಾಗಿ ದೂರ ತೆರಳಿರುವ ಮನೆಗಳನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿದೆ. ರಾತ್ರಿ ವೇಳೆ ಮನೆಗೆ ನುಗ್ಗುವ ಈ ಗ್ಯಾಂಗ್, ಮನೆಯ ಪ್ರಮುಖ ವಸ್ತುಗಳು, ನಗದು ದೋಚುತ್ತಿದೆ.

ನೊಯ್ಡಾ ಸೆಕ್ಟರ್ 25ರಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿದ ಈ ಗ್ಯಾಂಗ್ ಮೌಲ್ಯಯುತ ವಸ್ತುಗಳ ಜೊತೆಗೆ ಮನೆಯಲ್ಲಿ ತಿಂಡಿ ತಿನಿಸುಗಳನ್ನು ತಿಂದು ಪರಾರಿಯಾಗಿದೆ. ಸೆಕ್ಟರ್ 25ರಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿದ ಈ ಗ್ಯಾಂಗ್, ನೇರವಾಗಿ ಅಡುಗೆ ಕೋಣೆಗೆ ತೆರಳಿದೆ. ಬಳಿಕ ಅಡುಗೆ ಮನೆಯಲ್ಲಿರುವ ಈರುಳ್ಳಿ ಸೇರಿದಂತೆ ಇತರ ವಸ್ತುಗಳನ್ನು ಬಳಸಿ ಪಕೋಡ ತಯಾರಿಸಿ ಸವಿದಿದ್ದಾರೆ. ಬಳಿಕ ಫ್ರಿಡ್ಜ್‌ನಲ್ಲಿಟ್ಟ ಪಾನ್ ಬೀಡಾ ತಿಂದಿದ್ದಾರೆ. ನೀರು, ಜ್ಯೂಸ್ ಕುಡಿದು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಸಿಹಿ ತಿಂಡಿಗಳು ಸೇರಿದಂತೆ ಕೆಲ ವಸ್ತುಗಳನ್ನು ತಿಂದ ಬಳಿಕ ಕಳ್ಳತನಕ್ಕೆ ಇಳಿದಿದ್ದಾರೆ. ಲಾಕರ್ ಒಡೆದು ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಇದರ ಜೊತೆ ನಗದು ಹಣವನ್ನು ದೋಚಿದ್ದಾರೆ. ಈ ಕುರಿತು ಮನೆ ಮಾಲೀಕರು ದೂರು ದಾಖಲಿಸಿದ್ದಾರೆ. ಈ ವಿಲಕ್ಷಣ ಘಟನೆ ಭಾರೀ ಕುತೂಹಲ ಮೂಡಿಸಿದೆ. ಮನೆಗೆ ಭೇಟಿ ನೀಡಿದ ಪೊಲೀಸರು ಇಂಚಿಂಚೂ ಜಾಲಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.