ದೋಷಪೂರಿತ ಕಾರು ನೀಡಿದ BMW|50 ಲಕ್ಷ ರೂ ಪರಿಹಾರ ನೀಡಲು ಆದೇಶಿಸಿದ ಸುಪ್ರೀಂ ಕೋರ್ಟ್!

ಹೈದರಾಬಾದ್: ಐಷಾರಾಮಿ ಕಾರ್ ಬ್ರ್ಯಾಂಡ್ ಬಿಎಂಡಬ್ಲ್ಯೂ ಎಂದರೆ ಎಲ್ಲರೂ ಹುಬ್ಬು ಮೇಲೇರಿಸುತ್ತಾರೆ. ಭಾರತದಲ್ಲಿ ಬಿಎಂಡಬ್ಲ್ಯೂ  ಕಾರಿಗೆ ಬಾರಿ ಬೇಡಿಕೆ ಇದೆ. ಆದರೆ ಇಂತಹ ಪ್ರಸಿದ್ಧ ಸಂಸ್ಥೆ ಇದೀಗ ತನ್ನ ಗ್ರಾಹಕನಿಗೆ ದೋಷಪೂರಿತ ಕಾರನ್ನು ಪೂರೈಸಿದ ಅಪಖ್ಯಾತಿಗೆ ಪಾತ್ರವಾಗಿದೆ. ಮಾತ್ರವಲ್ಲ, ಸುಪ್ರೀಂ ಕೋರ್ಟ್ ಆದೇಶದಂತೆ ಗ್ರಾಹಕನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕಾದ ಸನ್ನಿವೇಶಕ್ಕೂ ತುತ್ತಾಗಿದೆ.



ಸೆಪ್ಟೆಂಬರ್ 25, 2009ರಲ್ಲಿ ಹೈದರಾಬಾದ್ ಗ್ರಾಹಕ ಹೊಚ್ಚ ಹೊಸ  BMW 7 ಸೀರಿಸ್ ಕಾರು ಖರೀದಿಸಿದ್ದರು. 4 ದಿನಗಳ ಬಳಿಕ ಮಾಲಕ ಡ್ರೈವಿಂಗ್ ಮಾಡುವ ವೇಳೆ ಕಾರಿನಲ್ಲಿ ಕೆಲ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದೆ. ಈ ವೇಳೆ ಕಾರು ಸರ್ವೀಸ್ ಸಿಬ್ಬಂದಿಗಳು ಕಾರು ತಪಾಸಣೆ ಮಾಡಿದ್ದಾರೆ.  ಬಳಿಕ ನೆವೆಂಬರ್ 13, 2009ರಂದೂ ಇದೇ ರೀತಿ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಗ್ರಾಹಕನಿಗೆ ದೋಷಪೂರಿತ  ಕಾರನ್ನು ತನಗೆ ನೀಡಲಾಗಿದೆ ಅನ್ನೋದು ಮನದಟ್ಟವಾಗಿದೆ.

ಹೀಗಾಗಿ ನವೆಂಬರ್ 16, 2009ರಂದು ಮಾಲಕರು  BMW ವಿರುದ್ಧ ದೂರು ದಾಖಲಿಸಿದ್ದರು. 2012ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್,  BMW ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿತ್ತು. ಇಷ್ಟೇ ಅಲ್ಲ ಗ್ರಾಹಕನಿಗೆ ದೋಷಪೂರಿತ ಕಾರು ನೀಡಿರುವ ಕಾರಣ ಹೊಚ್ಚ ಹೊಸ  BMW ಕಾರು ನೀಡುವಂತೆ ಕೋರ್ಟ್ ಸೂಚಿಸಿತ್ತು.  ಅತ್ತ  BMW ಡೀಲರ್ ಕೂಡ ಇದಕ್ಕೆ ಒಪ್ಪಿಕೊಂಡಿದ್ದರು. ಗ್ರಾಹಕನಿಗೆ ಹೊಸ ಕಾರು ನೀಡಲು  BMW ಡೀಲರ್ ತಯಾರಿ ನಡೆಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ಗ್ರಾಹಕ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಹೀಗಾಗಿ ತನ್ನ ವಕೀಲರ ಮೂಲಕ  BMW ಕಾರು ಡೀಲರ್ಗೆ ನೋಟಿಸ್ ಸಲ್ಲಿಸಲಾಯಿತು. ಈ ಆದೇಶವನ್ನು ಗ್ರಾಹಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ತಾನು  BMW ಕಾರು ಸ್ವೀಕರಿಸಲು ಸಾಧ್ಯವಿಲ್ಲ. ತಾನು ಕಾರು ಖರೀದಿಸುವಾಗ ನೀಡಿದ ಮೊತ್ತ, ಅದಕ್ಕೆ ಬಡ್ಡಿ ಸೇರಿಸಿ ವಾಪಸ್ ನೀಡುವಂತೆ ಆಗ್ರಹಿಸಲಾಗಿತ್ತು. ಹೀಗಾಗಿ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಗ್ರಾಹಕನ ಪರವಾಗಿ ತೀರ್ಪು ನೀಡಿದೆ. ಗ್ರಾಹಕನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ತೀರ್ಪು ಬಿಎಂಡಬ್ಲ್ಯೂ ಕಾರಿನ ಗುಣಮಟ್ಟದ ಬಗ್ಗೆ ಸಂಶಯ ತಾಳುವಂತೆ ಮಾಡಿದೆ.