ಬಂಟ್ವಾಳದಲ್ಲಿ ಮಳೆಗೆ ಹಲವೆಡೆ ಹಾನಿ

 


ಬಂಟ್ವಾಳ: ದಿನವಿಡೀ ಸೋಮವಾರ ಸುರಿದ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನಾದ್ಯಂತ ಹಾನಿಗಳು ಸಂಭವಿಸಿವೆ. ಹೆದ್ದಾರಿಯ ರಸ್ತೆ ಸಹಿತ ಒಳರಸ್ತೆಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾಯಿತು. ಶಾಲೆಗಳು ಕಾರ್ಯಾಚರಿಸಿದ ಹಿನ್ನೆಲೆಯಲ್ಲಿ ಹಳ್ಳಿಪ್ರದೇಶದ ಮಕ್ಕಳು ಮಳೆಗೆ ಸಮಸ್ಯೆ ಅನುಭವಿಸಿದರು. ಮಳೆಯಿಂದ ಹಲವೆಡೆ ಹಾನಿಗಳು ಸಂಭವಿಸಿರುವ ಕುರಿತು ಬಂಟ್ವಾಳ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.

ಶಂಭೂರು ಗ್ರಾಮದ ಮೋಹನದಾಸ ಪೂಜಾರಿ ಅವರ  ವಾಸ್ತವ್ಯದ ಮನೆಗೆ ಮಳೆ ಗಾಳಿಯಿಂದ ತೀವ್ರ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಯವರನ್ನು ಸ್ಥಳಾಂತರಗೊಳಿಸಲಾಯಿತು. ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ  ಎಂಬಲ್ಲಿ ದೇವಕಿ ಮೂಲ್ಯ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ನೇತ್ರಾವತಿ ನದಿಯ ಮಟ್ಟದಲ್ಲಿ ಏರಿಕೆ ಕಂಡುಬಂದಿಲ್ಲ. ಆದಾಗ್ಯೂ ತಗ್ಗು ಪ್ರದೇಶದ ಜನರು ಜಾಗರೂಕರಾಗಿರುವಂತೆ ಆಡಳಿತ ತಿಳಿಸಿದೆ. ನದಿಗೆ ಇಳಿಯದಂತೆ ಎಚ್ಚರವಹಿಸಲು ಸೂಚಿಸಿದೆ.