ವಿಧಾನಸಭೆಯಲ್ಲಿ BJP, JDS ಅಹೋರಾತ್ರಿ ಧರಣಿ| ಶಾಸಕರಿಂದ ಭಜನೆ, ಹಾಡು, ಹನುಮಾನ್ ಚಾಲೀಸ ಪಠಣ..!!

ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿಗೆ ಮುಂದಾಗಿವೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಸದನದಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಬಿಜೆಪಿ ಸದಸ್ಯರು ಗಮನ ಸೆಳೆದರು.



 ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಭಾಗೀರಥಿ ಮುರಳ್ಯ ಸದನದಲ್ಲಿ ಧರಣಿಯ ವೇಳೆ ಹನುಮಾನ್ ಚಾಲೀಸ್ ಪಠಣ ಮಾಡಿದರು. ಇದಕ್ಕೆ ಇತರ ಸದಸ್ಯರು ಸಾಥ್ ನೀಡಿದರು. ಇನ್ನು ಧರಣಿಯ ವೇಳೆ ಆರ್ ಎಸ್ ಎಸ್ ಶಾಖೆಯ ಪ್ರಾರ್ಥನೆಯನ್ನು ಮಾಡಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಂದಾದರು. ಈ ವೇಳೆ ಇದಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಬೈರತಿ ಬಸವರಾಜ ಬೇಡ ಎಂದು ಸೂಚಿಸಿದರು. ಹೀಗಾಗಿ ಹರೀಶ್ ಪೂಂಜಾ ಸುಮ್ಮನಾದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಸದನದಲ್ಲಿ ನಿಲುವಳಿ ಮಂಡಿಸಲು ಮುಂದಾಗಿದ್ದರು. ಆದರೆ ಬಿಜೆಪಿಯ ನಿಲುವಳಿಯನ್ನು ಸ್ಪೀಕರ್ ಯು.ಟಿ ಖಾದರ್ ತಿರಸ್ಕಾರ ಮಾಡಿದ್ದರು. ಇದರಿಂದ ಸದನದ ಬಾವಿಗೆ ಇಳಿದು ಬಿಜೆಪಿ ಧರಣಿ ನಡೆಸಿತ್ತು. ಬಳಿಕ ಅಹೋರಾತ್ರಿ ಧರಣಿ ಘೋಷಣೆ ಮಾಡಿದೆ. ಸದನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಭಾರೀ ಕುತೂಹಲ ಮೂಡಿಸಿದೆ.