ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜೈಲಿನಲ್ಲಿ ವಿವಿಧ ಸವಲತ್ತು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.
ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ & ಟೀಂನ ನ್ಯಾಯಾಂಗ ಬಂಧನವನ್ನು ಜುಲೈ 18ರವರೆಗೆ ವಿಸ್ತರಿಸಲಾಗಿದೆ. ಇದರ ನಡುವೆ 26 ದಿನಗಳಲ್ಲಿ ದರ್ಶನ್ 10 ಕೆಜಿ ತೂಕ
ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ಗೆ
ಜೈಲಿನಲ್ಲಿ ಒಂದೊಂದು ಕ್ಷಣ ಕಳೆಯುವುದು ಕೂಡ ಕಷ್ಟವಾಗುತ್ತಿದೆ. ಚಾಪೆಯಲ್ಲಿ ಮಲಗಲು
ಸಾಧ್ಯವಾಗುತ್ತಿಲ್ಲವಂತೆ. ಜೈಲಿನ ಊಟವೂ ಕೂಡ ದೇಹಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಹೀಗಾಗಿ ಜೈಲು
ಅಧಿಕಾರಿಗಳು ಕೆಲವು ಅನುಕೂಲ ಮಾಡಿಕೊಡುವಂತೆ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ
ಸಲ್ಲಿಸಿದ್ದಾರೆ.
ಇನ್ನು ದರ್ಶನ್ ಪರ ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ನಟ ದರ್ಶನ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದರು. ಜೈಲು ನಿಯಮಾವಳಿಗಳಲ್ಲಿ ಮನೆಯೂಟಕ್ಕೆ ಅವಕಾಶವಿದೆ. ಆದರೆ, ದರ್ಶನ್ಗೆ ಅವಕಾಶ ನೀಡಿಲ್ಲ ಎಂದರು. ವಕೀಲರ ವಾದವನ್ನು ಆಲಿಸಿರುವ ನ್ಯಾಯಾಲಯ, ಜೈಲಿನ ಕೈಪಿಡಿಯಲ್ಲಿ ಮನೆಯೂಟ ಕಲ್ಪಿಸುವ ಉಲ್ಲೇಖವಿದೆಯೇ? ಎಂದು ಪ್ರಶ್ನಿಸಿ, ಕಾನೂನು ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದೆ.
ಜೈಲಿನಲ್ಲಿ ದೊರೆಯುತ್ತಿರುವ ಊಟ ದರ್ಶನ್ಗೆ ಜೀರ್ಣವಾಗುತ್ತಿಲ್ಲವಂತೆ, ಊಟ ಸೇವಿದರೆ ಅತಿಸಾರ ಮತ್ತು ಬೇದಿಯಾಗುತ್ತಿದೆ ಎಂದು ಹೈಕೋರ್ಟ್ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮನೆಯೂಟ, ಹಾಸಿಗೆ ಮತ್ತು ಸಮಯ ಕಳೆಯಲು ಪುಸ್ತಕಗಳನ್ನು ಓದಲು ದರ್ಶನ್ ಅನುಮತಿ ಕೋರಿದ್ದಾರೆ. ಹೀಗಾಗಿ ಕೆಲವು ಬೇಡಿಕೆಗಳನ್ನು ಪೂರೈಸುವಂತೆ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಪರ ರಿಟ್ ಅರ್ಜಿ ಸಲ್ಲಿಸಲಾಗಿದೆ.
ದರ್ಶನ್
ಬಂಧನವಾದಾಗ 107 ಕೆಜಿ
ತೂಕವಿದ್ದರು. ಇದೀಗ 97 ಕೆಜಿಗೆ
ಇಳಿದಿದ್ದಾರೆ. ಇದೇ ರೀತಿ ತೂಕ ಇಳಿಕೆಯಾದರೆ ಆರೋಗ್ಯಕ್ಕೆ ತೊಂದರೆಯಾಗಲಿದೆ. ಜೀವಕ್ಕೆ ಕುತ್ತು
ಬರುವ ಸಾಧ್ಯತೆಯು ಇದೆ. ದರ್ಶನ್ ಅವರು ಜೈಲಿನಲ್ಲಿ ಒಬ್ಬಂಟಿಯಾಗಿದ್ದು, ಯಾರೊಂದಿಗೂ ಮಾತನಾಡಲು ಇಷ್ಟಪಡುತ್ತಿಲ್ಲ ಮತ್ತು
ಕಾಲಕಾಲಕ್ಕೆ ದರ್ಶನ್ ಅವರ ಆರೋಗ್ಯ ಸಂಬಂಧಿ ಪರೀಕ್ಷೆಗಳು ನಡೆಯುತ್ತಿವೆ ಎಂಬ ಮಾಹಿತಿ ಜೈಲಿನ ಮೂಲಗಳಿಂದ ತಿಳಿದುಬಂದಿದೆ.

Social Icons