BANTWAL: ಎಚ್ಚರಿಕೆಗೆ ಕ್ಯಾರೆನ್ನದೆ ತ್ಯಾಜ್ಯ ಎಸೆತ: ಪೊಲೀಸ್ ಮೊರೆ ಹೋದ ಆಡಳಿತ


ವರದಿ: ಹರೀಶ್ ಮಾಂಬಾಡಿ

ಬಂಟ್ವಾಳ: ಇಲ್ಲಿ ತ್ಯಾಜ್ಯ ಎಸೆಯಬೇಡಿ ಎಂಬ ಫಲಕಕ್ಕೆ ಬೆಲೆ ಇಲ್ಲ. ತ್ಯಾಜ್ಯ ಸಂಗ್ರಹ ವಾಹನದಲ್ಲೇ ಕಸವನ್ನು ನೀಡಿ, ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂಬ ಪ್ರಕಟಣೆಗಳು ಲೆಕ್ಕಕ್ಕಿಲ್ಲ. ವಾಹನಗಳಿಗೆ ನೀಡಲು ಪುರುಸೊತ್ತಿಲ್ಲ, ನಾವು ಪ್ರತ್ಯೇಕವಾಗಿ ಕೊಂಡೊಯ್ಯುವರಿಗೆ ಕಸ ಕೊಡ್ತೇವೆ. ಅವರು ಎಲ್ಲಿಗೆ ಎಸೀತಾರೋ ಎಂದು ಗೊತ್ತಿಲ್ಲ ಎಂಬುದು ಕೆಲವರ ಮಾತು. ಬಂಟ್ವಾಳ ಪುರಸಭೆಯ ಆಯಕಟ್ಟಿನ ಜಾಗಗಳಲ್ಲೆಲ್ಲಾ ತ್ಯಾಜ್ಯಗಳು ಕಾಣಿಸಿಕೊಳ್ಳಲಾರಂಭಿಸಿವೆ. ಇವುಗಳನ್ನು ಯಾರು ಹಾಕುತ್ತಾರೆ ಎಂದು ಗೊತ್ತಾದರೂ ಕ್ರಮ ಕೈಗೊಳ್ಳುತ್ತೇವೆ ಎಂದರೂ ಲೆಕ್ಕಕ್ಕೆ ತೆಗೆದುಕೊಳ್ಳದವರ ವರ್ತನೆಯಿಂದ ಬೇಸತ್ತು ಪುರಸಭೆ ಮುಖ್ಯಾಧಿಕಾರಿ ಪೊಲೀಸ್ ಮೊರೆ ಹೋಗಿದ್ದಾರೆ. ಪ್ರಸ್ತುತ ಎರಡು ಪ್ರಕರಣಗಳಲ್ಲಿ ಪುರಸಭೆ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಕೋರಿದೆ.

ವಿಷಯವೇನು?

ಬಿ.ಸಿ.ರೋಡ್ ಬಳಿಕ ಕಂಚಿಕಾರಪೇಟೆ ಎಂಬ ಜಾಗವಿದೆ. ನೇತ್ರಾವತಿ ನದಿಗೆ ಹತ್ತಿರದ ಜಾಗವಿದು. ಅಲ್ಲಿ ಕಸದ ರಾಶಿ ಯಾವಾಗಲೂ ಕಂಡುಬರುತ್ತದೆ. ಜೂನ್ 26ರಂದು ರಾತ್ರಿ ಅಲ್ಲಿ ಘನತ್ಯಾಜ್ಯ ಎಸೆದಿರುವುದು ಕಂಡುಬಂದಿದ್ದನ್ನು ಪರಿಶೀಲಿಸಿದಾಗ, ಬಿ.ಸಿ.ರೋಡಿನಲ್ಲಿರುವ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಯೊಂದರರ ತ್ಯಾಜ್ಯ ಎಂದು ಕಂಡುಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಎಸೆದ ತ್ಯಾಜ್ಯದಿಂದ ಸನಿಹದ ನದಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ, ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳನ್ವಯ ತ್ಯಾಜ್ಯ ಉತ್ಪಾದಕರೇ ತ್ಯಾಜ್ಯ ವಿಲೇವಾರಿಗೆ ಜವಾಬ್ದಾರರಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿದು, ಪರಿಸರ ಮಾಲಿನ್ಯ ಉಂಟುಮಾಡಿರುವ ಅಂಗಡಿಯವರ ವಿರುದ್ಧ ಕೇಸು ದಾಖಲಿಸಲು ಕ್ರಮ ಕೈಗೊಳ್ಳುವಂತೆ ಪುರಸಭೆಯಿಂದ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿಯ ಕೆಳಗಿನ ಭಾಗಕ್ಕೆ ಪಿಕಪ್ ವಾಹನವೊಂದರಿಂದ ಜೂನ್ 30ರಂದು ಟ್ಯೂಬ್ ಲೈಟ್ ಗಳನ್ನು ಎಸೆದಿರುವುದು ಕಂಡುಬಂದಿದೆ. ಈ ರೀತಿ ಹಾನಿಕಾರಕ ವಿದ್ಯುತ್ ಉಪಕರಣ ಸಂಬಂಧಿತ ತ್ಯಾಜ್ಯವನ್ನು ತಂದು ಸುರಿದು, ಪರಿಸರ ಮಾಲಿನ್ಯ ಮಾಡಿರುವುದರಿಂದ ತ್ಯಾಜ್ಯವು ಸನಿಹದ ತೋಡಿನ ಮೂಲಕ ನದಿಯನ್ನು ಸೇರಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳುವಂತೆ ನಗರ ಠಾಣೆಗೆ ದೂರನ್ನು ಮುಖ್ಯಾಧಿಕಾರಿ ನೀಡಿದ್ದಾರೆ.