BANTWAL : ದಡ್ಡಲಕಾಡು ಶಾಲೆ ಶಿಕ್ಷಕ ವರ್ಗಾವಣೆ - ಹೈಸ್ಕೂಲ್ ಪೋಷಕರ ಪ್ರತಿಭಟನೆ

 


ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಹೈಸ್ಕೂಲ್ ವಿಭಾಗದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಪೋಷಕರೊಂದಿಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ವರ್ಗಾವಣೆಗೊಂಡ ಮುಖ್ಯ ಶಿಕ್ಷಕರು ಮರುನಿಯೋಜನೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಅವರ ಮೇಲೆ ವೃಥಾ ಆರೋಪ ಹೊರಿಸಲಾಗಿದೆ ಎಂದು ಆಕ್ಷೇಪಿಸಿರುವ ಪೋಷಕರು, ಈ ಕುರಿತು ದತ್ತು ಸ್ವೀಕಾರದ ಟ್ರಸ್ಟ್ ಮತ್ತು ಎಸ್.ಡಿ.ಎಂ.ಸಿ. ಧೋರಣೆಯನ್ನು ಟೀಕಿಸಿದರು.  ಪೋಷಕರ ಪರವಾಗಿ ಸುಕುಮಾರ್ ಬಂಟ್ವಾಳ್ ಮಾತನಾಡಿ, ಶಿಕ್ಷಕರ ವರ್ಗಾವಣೆಯಿಂದ ಬದಲಿ ಶಿಕ್ಷಕರ ನಿಯೋಜನೆಯನ್ನೂ ಮಾಡದೇ ಇರುವ ಕಾರಣ ಶಾಲೆಯಲ್ಲಿ ಮಕ್ಕಳಿಗೆ ತೊಂದರೆ ಉಂಟಾಗಿದ್ದು, ಪಾಠ ಪ್ರವಚನಕ್ಕೆ ಅನುಭವಿ ಶಿಕ್ಷಕರ ಕೊರತೆ ಇದೆ ಎಂದು ಹೇಳಿದ್ದಾರೆ. 

ಹಠಾತ್ ಕುಸಿದ ಬಿಇಒ

ಮನವಿ ಆಲಿಸುತ್ತಿದ್ದ ಸಂದರ್ಭ ಬಿಇಒ ಮಂಜುನಾಥನ್ ಹಠಾತ್ ಕುಸಿದ ಘಟನೆ ನಡೆಯಿತು. ಈ ಸಂದರ್ಭ ಸಿಬ್ಬಂದಿ ಅವರನ್ನು ಉಪಚರಿಸಿ, ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಅಧಿಕಾರಿಗಳಾದ ವಿಷ್ಣು ಹೆಬ್ಬಾರ್ ಮತ್ತು ರಾಘವೇಂದ್ರ ಬಲ್ಲಾಳ್ ಮನವಿ ಸ್ವೀಕರಿಸಿದರು. ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಸಮರ್ಪಕವಾಗಿ, ನಿಷ್ಪಕ್ಷಪಾತವಾಗಿ ಈ ಕುರಿತು ಗಮನಹರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.