ಪ್ರೀತಿಸಿದ ಯುವತಿಯನ್ನು ಮುಂಬೈಯಲ್ಲಿ ಕೊಂದ ಆರೋಪಿ ಯಾದಗಿರಿಯಲ್ಲಿ ಅರೆಸ್ಟ್



ಮುಂಬೈ: ಪ್ರೀತಿಸಿದ ಯುವತಿಯನ್ನೇ ಮುಂಬಯಿಯಲ್ಲಿ ಬರ್ಬರವಾಗಿ ಕೊಲೆಗೈದು ತಲೆಮರೆಸಿಕೊಂಡಿದ್ದ ಕರ್ನಾಟಕ ಮೂಲದ ದಾವೂದ್ ಎಂಬಾತನನ್ನು ಮುಂಬಯಿ ಪೊಲೀಸರು ಯಾದಗಿರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.


ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಾವೂದ್ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಂಗರಗಾ ಗ್ರಾಮದವನು. ಈತ ಫೇಸ್‌ಬುಕ್ ಮೂಲಕ ಮುಂಬಯಿಯ ಯಶಶ್ರೀ ಶಿಂಧೆ(25) ಎಂಬ ಯುವತಿಯನ್ನು ಪ್ರೀತಿಸಿ ಫೋನ್ ಸಂಪರ್ಕದಲ್ಲಿದ್ದ. 2019ರಲ್ಲಿಯೇ ಈಕೆಗೆ ಕಿರುಕುಳ ನಿಡಿದ ಆರೋಪದಲ್ಲಿ ಜೈಲುವಾಸ ಅನುಭಸಿದ್ದ. 


ದಾವೂದ್ ಜುಲೈ 27ರಂದು ಮುಂಬಯಿಯಲ್ಲಿ ಯಶಶ್ರೀಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪರಾರಿಯಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ. ಯಶಶ್ರೀ ಕೊಲೆ ಪ್ರಕರಣ ಬೆನ್ನತ್ತಿದ ಮುಂಬೈ ಮುಂಬಯಿ ನಗರ ಠಾಣೆ ಪೊಲೀಸರು ನಾಲ್ಕು ತಂಡ ರಚಿಸಿದ್ದರು. ಒಂದು ತಂಡ ಯಾದಗಿರಿಗೆ ಆಗಮಿಸಿ ಸೋಮವಾರ ರಾತ್ರಿ ಆರೋಪಿ ಅಡಗಿದ್ದ ಸ್ಥಳ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಜುಲೈ 27 ಶನಿವಾರ ಯುವತಿಯ ಮೃತದೇಹ ರಕ್ತದ ಮಡುವಿನಲ್ಲಿ ನವೀ ಮುಂಬೈನಲ್ಲಿ ಪತ್ತೆಯಾಗಿತ್ತು. ಆಕೆಯ ಎದೆ, ಸೊಂಟ, ಬೆನ್ನು ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಹಲವಾರು ಇರಿತದ ಗಾಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಆಕೆಯ ಮೂಳೆಗಳು ಮುರಿದಿವೆ ಎಂದು ಪೊಲೀಸರು ಹೇಳಿದ್ದಾರೆ.