ಹೀಗೂ ಉಂಟೇ..?!! Answer Paperನಲ್ಲಿ ಹೃದಯದ ಚಿತ್ರ ಬಿಡಿಸಿ ಹುಡುಗಿಯರ ಹೆಸರು ಬರೆದ ವಿದ್ಯಾರ್ಥಿ..!!

 ನವದೆಹಲಿ: ಪರೀಕ್ಷೆಯ ಸಂದದರ್ಭದಲ್ಲಿ ಕ್ವಶ್ಚನ್ ಪೇಪರ್ ನಲ್ಲಿ ಇರುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಾಗ ಹೆಚ್ಚಿನ ವಿದ್ಯಾರ್ಥಿಗಳು ಏನು ಮಾಡುತ್ತಾರೆಂದರೆ ಅದನ್ನು ಬಿಟ್ಟು ಬೇರೆ ಪ್ರಶ್ನೆಯತ್ತ ಗಮನ ಹರಿಸುತ್ತಾರೆ. ಇನ್ನು ಕೆಲವರೂ ಏನಾದರೂ ತುಂಬಿಸೋಣ ಅಂತ ಮನಸ್ಸಿಗೆ ಅನಿಸಿದ್ದನ್ನು ಬರೆಯುತ್ತಾರೆ. ಉತ್ತರ ಪತ್ರಿಕೆಯಲ್ಲಿ ಹಾಡಿನ ಸಾಹಿತ್ಯ ಬರೆದಿರುವುದು ಮತ್ತು ತಮ್ಮ ನೋವಿನ ಮಾತುಗಳನ್ನು ಬರೆದಿರುವುದನ್ನು ಈಗಾಗಲೇ ಹಲವು ಬಾರಿ ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದೆಲ್ಲದಕ್ಕಿಂತಲೂ ಮುಂದೆ ಹೋಗಿದ್ದಾನೆ. ಅದೇನು ಎನ್ನುವುದನ್ನು ಮುಂದೆ ಓದಿ.





ದೆಹಲಿಯ ಶಾಲೆಯೊಂದರ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಯಲ್ಲಿ ಮಾನವನ ಹೃದಯ ಬಿಡಿಸಿ, ಅಂಗಗಳನ್ನು ಹೆಸರಿಸಿ, ಅದರ ಕಾರ್ಯಗಳನ್ನು ವಿವರಿಸಲು ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಗೆ ಎಲ್ಲಾ ವಿದ್ಯಾರ್ಥಿಗಳು ತಮ್ಮಿಂದಾದ ಮಟ್ಟಿಗೆ ಉತ್ತರಿಸಿದ್ದರು. ಆದರೆ ಓರ್ವ ವಿದ್ಯಾರ್ಥಿ ಬಿಡಿಸಿದ ಚಿತ್ರ ಮತ್ತು ಹೆಸರಿಸಿದ ಭಾಗಗಳನ್ನು ನೋಡಿ ಉತ್ತರ ಪತ್ರಿಕೆ ತಿದ್ದಿದ ಟೀಚರ್ ದಂಗಾಗಿ ಹೋಗಿದ್ದಾರೆ. ವಿದ್ಯಾರ್ಥಿಯು ಸಹ ತುಂಬಾ ಸೊಗಸಾಗಿ ಹೃದಯದ ಚಿತ್ರವನ್ನು ಬಿಡಿಸಿದ್ದಾನೆ. ಆದರೆ, ಹೃದಯದ ಭಾಗಗಳನ್ನು ಹೆಸರಿಸುವಾಗ ವಿದ್ಯಾರ್ಥಿ ಯಾರೂ ನಿರೀಕ್ಷೆ ಮಾಡಿರದ ಹೆಸರುಗಳನ್ನು ಬರೆದಿದ್ದಾನೆ.

ಇಲ್ಲಿ ವಿದ್ಯಾರ್ಥಿಯು ಶೂನ್ಯ ಅಂಕಗಳನ್ನು ಗಳಿಸಿದರೂ ಕೂಡ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಏಕೆಂದರೆ, ಆ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ತನ್ನ ಹೃದಯವನ್ನೇ ತೆರೆದಿಟ್ಟಿದ್ದಾನೆ. ಅಷ್ಟಕ್ಕೂ ವಿದ್ಯಾರ್ಥಿ ಬರೆದ ಹೃದಯದ ಭಾಗದ ಹೆಸರುಗಳು ಎಲ್ಲವು ಕೂಡ ಹುಡುಗಿಯರ ಹೆಸರಾಗಿದೆ. ಈ ಮೂಲಕ ತನ್ನ ಭಾವನೆಗಳನ್ನು ಉತ್ತರ ಪತ್ರಿಕೆ ಮೂಲಕ ಬಹಿರಂಗಪಡಿಸಿದ್ದಾನೆ. ವಿದ್ಯಾರ್ಥಿ ಚಿತ್ರಿಸಿರುವ ಹೃದಯದಲ್ಲಿ ಐದು ಹುಡುಗಿಯರ ಹೆಸರಿದೆ. ಅವುಗಳೆಂದರೆ, ಹರಿತಾ, ಪ್ರಿಯಾ, ರೂಪ, ನಮಿತಾ ಮತ್ತು ಪೂಜಾ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಹುಡುಗಿಯರ ಹೆಸರನ್ನು ಬರೆದ ಬಳಿಕ ಅವರ ಕಾರ್ಯಗಳನ್ನು ಕೂಡ ವಿದ್ಯಾರ್ಥಿ ವಿವರಿಸಿದ್ದಾನೆ.

           

ಪ್ರಿಯಾ: ಯಾವಾಗಲೂ ನನ್ನೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಚಾಟ್​ ಮಾಡುತ್ತಿರುತ್ತಾಳೆ. ಹೀಗಾಗಿ ನಾನು ಆಕೆಯನ್ನು ಇಷ್ಟಪಡುತ್ತೇನೆ.

ರೂಪಾ: ಈಕೆ ನನ್ನೊಂದಿಗೆ ಸ್ನಾಪ್​ಚಾಟ್​ನಲ್ಲಿ ಚಾಟ್​ ಮಾಡುತ್ತಾಳೆ. ತುಂಬಾ ಸುಂದರವಾಗಿದ್ದಾಳೆ ಮತ್ತು ಕ್ಯೂಟ್​ ಆಗಿದ್ದಾಳೆ.

ನಮಿತಾ: ಈಕೆ ನಮ್ಮ ನೆರೆಮನೆಯವರ ಮಗಳು. ಈಕೆಗೆ ಉದ್ದವಾದ ಕೂದಲು ಮತ್ತು ದೊಡ್ಡ ಕಣ್ಣುಗಳಿವೆ.

ಪೂಜಾ: ಈಕೆ ನನ್ನ ಮಾಜಿ ಪ್ರೇಯಸಿ. ನಾನು ಆಕೆಯನ್ನು ಮರೆಯಲು ಆಗುತ್ತಿಲ್ಲ.

ಹರಿತಾ: ಹರಿತಾ ನನ್ನ ಸಹಪಾಠಿ.

ಹೀಗೆ ಎಲ್ಲಾ ಹುಡುಗಿಯರ ಬಗ್ಗೆ ವಿವರಣೆಯನ್ನೂ ಕೂಡ ಬರೆದಿದ್ದಾನೆ. ಸದ್ಯ ವಿದ್ಯಾರ್ಥಿ ಬರೆದ ಹೃದಯದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ನೋಡಿದವರು ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಶಿಕ್ಷಣ, ವಿದ್ಯಾರ್ಥಿಗಳ ಮಟ್ಟ ಎಲ್ಲಿಗೆ ಮುಟ್ಟಿದೆ ಎಂದು ಕೂಡ ಪ್ರಶ್ನಿಸುತ್ತಿದ್ದಾರೆ.