ಮೂವರು ಬಾಲಕರು ಮೃತಪಟ್ಟ ಬೆನ್ನಲ್ಲೇ ಮತ್ತೋರ್ವ ಬಾಲಕನಲ್ಲಿ ಮೆದುಳು ತಿನ್ನುವ ಅಮೀಬಾ - ಆತಂಕದಲ್ಲಿ ದೇವರ ನಾಡು ಕೇರಳ



ಕೇರಳ: ಮೇ ತಿಂಗಳಿನಿಂದ ಮೆದುಳು ತಿನ್ನುವ ಅಮೀಬಾಗೆ 15 ವರ್ಷದೊಳಗಿನ ಮೂವರು ಬಾಲಕರು ಮೃತಪಟ್ಟಿದ್ದು ಕೇರಳ ರಾಜ್ಯದಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಕೊಯಿಕ್ಕೋಡ್‌ನಲ್ಲಿ ನಾಲ್ಕನೇ ಪ್ರಕರಣ ಪತ್ತೆಯಾಗಿದ್ದು, ಇನ್ನಷ್ಟು ಭೀತಿ ತಲೆದೋರಿದೆ. ಪಯೋಲಿಯ ಅನ್ನೋ ಎಂಬ 14 ವರ್ಷದ ಬಾಲಕನಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆಯಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜುಲೈ 1ರಂದು ಈ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆ ನಡೆಸಿದ ವೈದ್ಯರು ಮೆದುಳು ತಿನ್ನುವ ಅಮೀಬಾ ಇರೋದನ್ನು ಪತ್ತೆ ಮಾಡಿದ್ದಾರೆ. ಸದ್ಯ ವಿದೇಶದಿಂದ ಔಷಧ ತರಿಸಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೆದುಳು ತಿನ್ನುವ ಈ ವಿಚಿತ್ರ ಅಮೀಬಾ ನೀರಿನಿಂದ ಮಕ್ಕಳ ದೇಹ ಸೇರುತ್ತದೆ. ಸ್ವಿಮ್ಮಿಂಗ್ ಫೂಲ್, ಕೆರೆ ಕಟ್ಟೆಗಳ ನೀರಿನಿಂದ ಅಮೀಬಾ ಮಕ್ಕಳ ದೇಹ ಸೇರುತ್ತದೆ. 4ನೇ ಅಮೀಬಾ ಪ್ರಕರಣ ಪತ್ತೆಯಾದ ತಕ್ಷಣ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡದಂತೆ ಜನರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಜೊತೆಗೆ ಸ್ವಿಮ್ಮಿಂಗ್‌ ಫೂಲ್, ಕೆರೆ ಕಟ್ಟೆಗಳ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.