ಇದ್ದ ಹುದ್ದೆಗಳು 5. ಅರ್ಜಿ ಸಲ್ಲಿಸಿದ್ದು 1000 ಮಂದಿ..!| ಉದ್ಯೋಗ ಸಂದರ್ಶನದಲ್ಲಿ ಕಾಲ್ತುಳಿತ

ಗುಜರಾತ್​: ನಮ್ಮಲ್ಲಿ ಉದ್ಯೋಗಾಕಾಂಕ್ಷಿಗಳು ಎಷ್ಟಿದ್ದಾರೆ, ಅದೆಷ್ಟರ ಮಟ್ಟಿಗೆ ಉದ್ಯೋಗದ ವಿಚಾರದಲ್ಲಿ ಸ್ಪರ್ಧೆಯಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸಂಸ್ಥೆಯೊಂದು 5 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿತ್ತು. ಆದರೆ ಇಲ್ಲಿ ಅರ್ಜಿ ಸಲ್ಲಿಸಿದ್ದು ಬರೋಬ್ಬರಿ 1000 ಮಂದಿ. ಇದರ ಪರಿಣಾಮ ಸಂದರ್ಶನದ ಸಂದರ್ಭದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ.



ಅಂಕಲೇಶ್ವರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಸಂದರ್ಶನಕ್ಕಾಗಿ ಅರ್ಜಿ ಕರೆಯಲಾಗಿತ್ತು. ರಾಸಾಯನಿಕ ವಿಭಾಗದಲ್ಲಿ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡುವ ಗುರಿಯೊಂದಿಗೆ ವಾಕ್-ಇನ್ ಸಂದರ್ಶನವನ್ನು ಆಯೋಜಿಸಲಾಗಿತ್ತು. ಬಿ.ಇ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು. ಕೆಮಿಕಲ್ ಇಂಜಿನಿಯರಿಂಗ್ ಮತ್ತು ಐಟಿಐ ಪ್ರಮಾಣೀಕರಣಗಳಲ್ಲಿ, ಶಿಫ್ಟ್ ಇನ್‌ಚಾರ್ಜ್, ಪ್ಲಾಂಟ್ ಆಪರೇಟರ್, ಸೂಪರ್‌ವೈಸರ್, ಮೆಕ್ಯಾನಿಕಲ್ ಫಿಲ್ಟರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇರ ಸಂದರ್ಶನ ಕರೆಯಲಾಗಿತ್ತು. 1000ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂಸ್ಥೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಸ್ಪರ್ಧೆಯಿಂದ ನೂಕುನುಗ್ಗಲು ಉಂಟಾಗಿದೆ.

ಸಂದರ್ಶನದ ವೇಳೆ ತಮ್ಮ ಸರದಿ ಬರುವವರೆಗೂ ಕಾಯದ ಅರ್ಜಿದಾರರು, ಹೋಟೆಲ್​ ಮುಂದೆ ನೂಕುನುಗ್ಗಲಿಗೆ ಕಾರಣರಾಗಿದ್ದಾರೆ. ನಾ ಮುಂದು ತಾ ಮುಂದು ಎಂದು ಒಬ್ಬರನೊಬ್ಬರು ತಳ್ಳುತ್ತಿದ್ದ ಯುವಕರು, ರೇಲಿಂಗ್​ನಿಂದ ದಿಢೀರ್​ ಕುಸಿದಿದ್ದಾರೆ. ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಯುವಕರು ಬಿದ್ದಿದ್ದು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.