ತನಗೆ ಕಚ್ಚಿದ ಹಾವಿಗೇ 3 ಬಾರಿ ಕಚ್ಚಿ ಕೊಂದ ಭೂಪ..!!

ಬಿಹಾರ: ಈ ಘಟನೆಯ ಬಗ್ಗೆ ಕೇಳಿದ ಮಂದಿ ಈ ಭೂಮಿಯಲ್ಲಿ ಎಂತೆಂತಹಾ ಪ್ರತಿಭೆಗಳಿದ್ದಾರಪ್ಪಾ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ತನಗೆ ಹಾವು ಕಚ್ಚಿತೆಂದು ಸಿಟ್ಟಿಗೆದ್ದ ವ್ಯಕ್ತಿ ಹಾವಿಗೆ ಮೂರು ಬಾರಿ ಕಚ್ಚಿದ್ದಾನೆ. ಇದರಿಂದ ಹಾವು ಸಾವಿಗೀಡಾಗಿದ್ದಾರೆ, ವ್ಯಕ್ತಿ ಬಚಾವ್‌ ಆಗಿದ್ದಾನೆ. ಈ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.



ಪಾಟ್ನಾದ ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂತೋಷ್ ಲೋಹರ್ ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದಾಗ ಆತನಿಗೆ ವಿಷಕಾರಿ ಹಾವೊಂದು ಕಚ್ಚಿದೆ. ಹಾವು ಕಚ್ಚಿದ್ದರಿಂದ ಗಾಬರಿಯಾಗುವ ಬದಲು ಸಿಟ್ಟಿಗೆದ್ದ ಸಂತೋಷ್‌, ಕಬ್ಬಿಣದ ಸಲಾಕೆಯಿಂದ ಹಾವನ್ನು ಹಿಡಿದು, ಅದಕ್ಕೆ ಮೂರು ಬಾರಿ ಕಚ್ಚಿದ್ದಾನೆ. ಈತ ಮೂರು ಬಾರಿ ಕಚ್ಚಿದ್ದರಿಂದ ಹಾವು ಸ್ಥಳದಲ್ಲಿಯೇ ಸಾವು ಕಂಡಿದೆ.

ಅಂದಹಾಗೆ ಈ ಕಾರ್ಮಿಕನ ವಿಲಕ್ಷಣ ನಡೆಯ ಹಿ‌ಂದೆ  ವಿಲಕ್ಷಣ ನಂಬಿಕೆಯೊಂದಿದೆ‌.  ಕಚ್ಚಿದ ಹಾವಿನ ವಿಷ ಶರೀರಕ್ಕೆ ಏರಬಾರದು ಎಂದರೆ ನಾವು ಹಾವಿಗೆ ಕಚ್ಚಬೇಕು‌ ಎನ್ನುವ ನಂಬಿಕೆಯ ಕಾರಣದಿಂದಾಗಿ ಸಂತೋಷ್‌ ಹಾವು ಕಚ್ಚಿದ ಬಳಿಕ ಮರಳೀ ಹಾವಿಗೆ ಮೂರು ಬಾರಿ ಕಚ್ಚಿದ್ದಾನೆ.

ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಮಿಕ ಸಂತೋಷ್ ಗೆ ಕಚ್ಚಿದ್ದ ಹಾವು ತೀವ್ರ ವಿಷಕಾರಿಯಾಗಿರಲಿಲ್ಲ, ಇಲ್ಲದಿದ್ದರೆ ಸಂತೋಷ್‌ನ ಜೀವಕ್ಕೆ ಗಂಭೀರ ಅಪಾಯವಿತ್ತು. ಸದ್ಯ ಕಾರ್ಮಿಕ  ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.