ಬೆಂಗಳೂರು: ಪ್ರಪಂಚಾದ್ಯಂತ ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಲ್ಕೇ ದಿನಕ್ಕೆ ಈ ಸಿನಿಮಾದ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ರೂ. ದಾಟಿದೆ.
ಭಾರತದಲ್ಲಿ ಆರಂಭಿಕ ಅಂದಾಜಿನ ಪ್ರಕಾರ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಬಿಡುಗಡೆಯಾದ 4 ದಿನಗಳಲ್ಲೇ 300 ಕೋಟಿ ರೂ. ಗಳಿಕೆಯ ಗಡಿ ದಾಟಿದೆ.
ಮೊದಲ ದಿನ 95.3 ಕೋಟಿ ರೂ, 2ನೇ ದಿನ 57.6 ಕೋಟಿ ರೂ, 3ನೇ ದಿನ 64.5 ಕೋಟಿ ರೂ ಮತ್ತು ಅದರ 4ನೇ ದಿನ ಸುಮಾರು 85 ಕೋಟಿ ರೂ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯಾಟದ ಹಿನ್ನೆಲೆಯಲ್ಲಿ ಶನಿವಾರದ ಸಂಗ್ರಹದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಿತ್ತು. ಆದರೆ ರವಿವಾರದ ಕಲೆಕ್ಷನ್ ಶನಿವಾರದ ನಷ್ಟವನ್ನೂ ಭರಿಸಿ ದಾಖಲೆ ಬರೆದಿದಿದೆ. ಉತ್ತರ ಅಮೆರಿಕಾದಲ್ಲಿ ಕಲ್ಕಿ ತನ್ನ ಮೊದಲ ವೀಕೆಂಡ್ ನಲ್ಲಿ 10 ಮಿಲಿಯನ್ ಡಾಲರ್ ಮೈಲಿಗಲ್ಲನ್ನು ದಾಟಿದೆ.
ಭಾನುವಾರ, ಕಲ್ಕಿ 2898 ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 10.85 ಮಿಲಿಯನ್ ಡಾಲರ್ ಗಳಿಸಿತು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ಹೆಸರೇ ಸೂಚಿಸುವಂತೆ ಚಿತ್ರವು ಹಿಂದೂ ಪುರಾಣವನ್ನು ಭವಿಷ್ಯದೊಂದಿಗೆ ಕನೆಕ್ಟ್ ಮಾಡುತ್ತದೆ.
ಮಹಾಭಾರತದ ಪ್ರಕಾರ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿರುವ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಈ ಕುಕೃತ್ಯಕ್ಕಾಗಿ ಕೃಷ್ಣ ಅವನಿಗೆ ಅಮರನಾಗಿ ಕಾಡಿನಲ್ಲಿ ಸುತ್ತುವ ಶಾಪ ನೀಡುತ್ತಾನೆ. ಅಶ್ವತ್ಥಾಮನ ಹಣೆಯಲ್ಲಿದ್ದ ದೈವಿಕ ರತ್ನವನ್ನೂ ತೆಗೆದುಕೊಳ್ಳಲಾಗುತ್ತೆ. ಕಲಿಯುಗದಲ್ಲಿ ವಿಷ್ಣುವಿನ ಕೊನೆಯ ಅವತಾರವಾದ ಕಲ್ಕಿಯನ್ನು ರಕ್ಷಿಸುವ ಮೂಲಕ ಅವನ ವಿಮೋಚನೆ ಆಗಲಿದೆ. ಕಲ್ಕಿ ಸಿನೆಮಾದ ಕಥೆ ಅಶ್ವತ್ಥಾಮನ ಈ ಪ್ರಯತ್ನದ ಸುತ್ತ ತಿರುಗುತ್ತೆ.
ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. 81 ವರ್ಷದ ಅಮಿತಾಬ್ ಬಚ್ಚನ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ನಟನೆ ಅನೇಕ ಕಿರಿಯ ಸಹನಟರಿಗಿಂತ ಹೆಚ್ಚು ಪ್ರಭಾವಿಯಾಗಿದೆ ಎಂಬ ವಿಮರ್ಶೆಗಳಿವೆ. ಚಿತ್ರದಲ್ಲಿ ಅವರ ಸಂಭಾಷಣೆ ಎಲ್ಲರಿಂದ ಪ್ರಶಂಸೆ ಪಡೆದಿದೆ.

Social Icons