ಇದು ವ್ಯಂಗ್ಯವೋ? ಕರುಣೆಯೋ?..!! | ಇಡೀ ರೆಸ್ಟೋರೆಂಟ್ ತಡಕಾಡಿ ಏನೂ ಸಿಗದೆ ತನ್ನ 20 ರೂ ಇಟ್ಟು ಹೊರಟ ಕಳ್ಳ..!!

ಹೈದರಾಬಾದ್: ಈ ಘಟನೆಯನ್ನು ನೋಡಿದವರಿಗೆ ಅದು ಹೇಗೆ ರಿಯಾಕ್ಟ್ ಮಾಡಬೇಕು ಎನ್ನುವುದೇ ಗೊಂದಲಮಯವಾಗಿದೆ. ರಾತ್ರಿ ವೇಳೆ ರೆಸ್ಟೋರೆಂಟ್‌ಗೆ ನುಗ್ಗಿದ ಕಳ್ಳ ಕ್ಯಾಶ್ ಕೌಂಟರ್ ಸೇರಿದಂತೆ ಎಲ್ಲಾ ಕಡೆ ತಡಕಾಡಿದರೂ ಒಂದು ರೂಪಾಯಿ ಸಿಗಲಿಲ್ಲ ಎಂದು ನಿರಾಸೆಗೊಂಡು ತನ್ನ ಬಳಿ ಇದ್ದ 20 ರೂಪಾಯಿಯನ್ನು ತೆಗೆದು ಟೇಬಲ್ ಮೇಲಿಟ್ಟಿದ್ದಾನೆ. ನೋಟಿನ ಮೇಲೆ ನೀರಿನ ಬಾಟಲಿಯೊಂದನ್ನು ಇಟ್ಟು ಪರಾರಿಯಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.


ಈ ಘಟನೆ ನಡೆದಿರುವುದು
ರಂಗರೆಡ್ಡಿ ಮಹೇಶ್ವರಂ ಬಳಿ ಇರುವ ರೆಸ್ಟೋರೆಂಟ್‌ನಲ್ಲಿ. ಬೆಳಗ್ಗೆಯಿಂದ ರಾತ್ರಿ ವರೆಗೆ ಈ ರೆಸ್ಟೋರೆಂಟ್ ಜನರಿಂದ ತುಂಬಿ ತುಳುಕುತ್ತದೆ. ಭಾರಿ ವ್ಯಾಪಾರ ವಹಿವಾಟು ನಡೆಯುತ್ತದೆ ಎಂದು ಕಳ್ಳನೊಬ್ಬ ಕನ್ನ ಹಾಕಿದ್ದಾನೆ. ಎಲ್ಲೆಡೆ ಸಿಸಿಟಿವಿ ಇರುವುದರಿಂದ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿ ಬಂದಿದ್ದಾನೆ. ಬಳಿಕ ರೆಸ್ಟೋರೆಂಟ್ ಬಾಗಿಲನ್ನು ಕಬ್ಬಿಣ ರಾಡ್ ಮೂಲಕ ಮುರಿದಿದ್ದಾನೆ. ಒಳ ಪ್ರವೇಶಿಸಿದ ಕಳ್ಳ ನೇರವಾಗಿ ಕ್ಯಾಶ್ ಹಾಗೂ ಬಿಲ್ಲಿಂಗ್ ಕೌಂಟರ್‌ಗೆ ತೆರಳಿದ್ದಾನೆ. ಕೌಂಟರ್ ಡ್ರವರ್ ಸೇರಿದಂತೆ ಎಲ್ಲೆಡೆ ತಡಕಾಡಿದ್ದಾನೆ. ಆದರೆ ಏನೂ ಸಿಗಲಿಲ್ಲ. ಇತರೆಡೆಯೂ ಹುಡುಕಾಡಿದ್ದಾನೆ. ಒಂದು ರೂಪಾಯಿ ಸಿಕ್ಕಿಲ್ಲ. ಕೊನೆಗೆ ಬೆಲೆಬಾಳುವ ವಸ್ತುಗಳೇನಾದರು ಸಿಗಬಹುದಾ ಎಂದು ಹುಡುಕಾಟ ನಡೆಸಿದ್ದಾನೆ. ಅದೆಷ್ಟೆ ಹುಡುಕಾಡಿದರೂ ಹಣವೂ ಸಿಗಲಿಲ್ಲ. ಬೆಲೆಬಾಳುವ ವಸ್ತುಗಳು ಸಿಗಲಿಲ್ಲ.



ರಾಡ್ ಮೂಲಕ ಬಾಗಿಲು ಒಡೆದು ಇಷ್ಟು ರಿಸ್ಕ್ ತೆಗೆದುಕೊಂಡು ಕಳ್ಳತನ ಮಾಡಲು ಬಂದರೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ ಎಂದು ಕಳ್ಳನಿಗೆ ನಿರಾಸೆಯಾಗಿದೆ. ಅಲ್ಲೆ ಇದ್ದ ಸಿಸಿಟಿವಿಯತ್ತ ಮುಖ ಮಾಡಿ, ಇಷ್ಟು ದೊಡ್ಡ ರೆಸ್ಟೋರೆಂಟ್‌ನಲ್ಲಿ ವ್ಯಾಪಾರವೇ ಇಲ್ಲವೇ ಎಂದು ಪ್ರಶ್ನಿಸಿದ್ದಾನೆ. ಬಳಿಕ ತನ್ನಲ್ಲಿದ್ದ ಹಣದಲ್ಲಿ 20 ರೂಪಾಯಿ ನೋಟು ತೆಗೆದು ಕ್ಯಾಶ್ ಕೌಂಟರ್ ಟೇಬಲ್ ಮೇಲೆ ಇಟ್ಟಿದ್ದಾನೆ. ನೋಟು ಎಗರಿ ಹೋಗದಂತೆ ನೀರಿನ ಬಾಟಲಿ ಇಟ್ಟ ಕಳ್ಳ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಳ್ಳನ ಈ ವಿಡಿಯೋ ವೈರಲ್ ಆಗಿದೆ. ಹಲವು ಸ್ಥಳೀಯ ಮಾಧ್ಯಮಗಳು ಈ ಕುರಿತ ವಿಡಿಯೋ ಪೋಸ್ಟ್ ಮಾಡಿದೆ. ಕಳ್ಳನ ನಡೆಯ ಬಗ್ಗೆ ವ್ಯಾಪಕ  ಚರ್ಚೆಯೂ ನಡೆಯುತ್ತಿದೆ.