ಮಂಗಳೂರು-ಬೆಂಗಳೂರು ರೈಲು ಸಂಚಾರ ಇನ್ನು 15 ದಿನ ಡೌಟ್!

ಮಂಗಳೂರು : ಮಳೆಯ ಪ್ರಮಾಣ ಒಂದಷ್ಟು ಕಡಿಮೆ ಆಗಿದ್ದರೂ ಮಳೆಯಿಂದ ಆಗಿರುವ ಅನಾಹುತವಂತೂ ಮುಂದುವರೆದಿದೆ. ಈಗ ಶಿರಾಡಿ ಘಾಟ್‌ನ ಎಡಕುಮೇರಿ-ಕಡಗರಳ್ಳಿ ಮಧ್ಯೆ ಗಂಭೀರ ಭೂಕುಸಿತದಿಂದ ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಆ.10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಹೀಗಾಗಿ ಈ ಮಾರ್ಗದಲ್ಲಿ ಇನ್ನೂ ಕೂಡ 15 ದಿನ ರೈಲು ಸಂಚರಿಸೋದು ಡೌಟ್ ಎಂದು ಹೇಳಲಾಗುತ್ತಿದೆ.


ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ. ಹಳಿಯ ಕೆಳಭಾಗದಲ್ಲಿ ಭಾರೀ ಆಳಕ್ಕೆ ಮಣ್ಣು ಜರಿದು ಹೋಗಿದ್ದು ಹಳಿಗೆ ಅಪಾಯ ಎದುರಾಗಿದೆ. ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳು ಮಾರ್ಗ ಬದಲಾಯಿಸಿ ಸಂಚರಿಸಿವೆ, ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಹಗಲು ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗ ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ.

ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್‌ ಮೂಲಕವೇ ತರಬೇಕಾಗುತ್ತದೆ. ಅದೂ ಈಗಿನ ಸಂದರ್ಭದಲ್ಲಿ ಅಪಾಯವಿರುವ ಕಾರಣ ಎಚ್ಚರಿಕೆಯಿಂದ ವ್ಯಾಗನ್‌ಗಳ ಮುಂದೆ, ಹಿಂದೆ ಎರಡೆರಡು ಎಂಜಿನ್‌ ಹಾಕಿ ಬಂಡೆ, ಇನ್ನಿತರ ವಸ್ತುಗಳನ್ನು ಸಾಗಿಸಲಾಗುತ್ತದೆ. ಅದನ್ನು ತಂದರೂ ಕುಸಿತವಾದ ಜಾಗಕ್ಕೆ ತರಲಾಗದು, ಯಾಕೆಂದರೆ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ. ಸುಮಾರು 750ಕ್ಕೂ ಅಧಿಕ ಮಂದಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆಗಾಗ ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆಗೆ ಗುಡ್ಡದ ಮಣ್ಣು ಮೆದುವಾಗಿರುವುದೇ ಭೂಕುಸಿತಕ್ಕೆ ಕಾರಣವೆಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿಯ ಪ್ರಪಾತದ ಬದಿಗೆ ಮಣ್ಣು ಸುಮಾರು 50-60 ಮೀಟರ್‌ನಷ್ಟು ಕುಸಿದು ಹೋಗಿದೆ. ಹಳಿಗೇ ಅಪಾಯ ಎದುರಾಗಿದೆ. ಪರ್ವತ ಬದಿಯಿಂದ ಭಾರಿ ಮಳೆಗೆ ನೀರು ಕೂಡಾ ಹರಿದು ಬರುವುದರಿಂದ ನಿರಂತರ ಕಾರ್ಯಾಚರಣೆಗೆ ಸವಾಲಾಗಿದೆ.ಹಳಿಯ ತಳಮಟ್ಟ ಗಟ್ಟಿಗೊಳಿಸಬೇಕಾದರೆ 20 ವ್ಯಾಗನ್‌ನಷ್ಟು ದೊಡ್ಡ ಬಂಡೆಗಳು ಬೇಕಾಗುತ್ತವೆ. ಪರ್ವತಗಳಿಗೆ ಹಾಕುವಂತಹ ಗೇಬಿಯನ್‌ ಮೆಷ್‌ ಬೇಲಿ ರೀತಿ ಹಾಕಿ, ಬಂಡೆಗಳನ್ನು ತುಂಬುತ್ತಾ ಬರಬೇಕಿದೆ. ಆದರೆ ಗುಡ್ಡದ ಮಣ್ಣು ಮೆತ್ತಗಾಗಿರುವುದನ್ನು ನೋಡಿದರೆ ಈ ಮೆಷ್‌ ಹಾಕುವುದೂ ಕಷ್ಟವಾಗಿ ಪರಿಣಮಿಸಿದೆ. ಮಳೆ ತೀವ್ರತೆಗೆ ಹಾಕಿದ ವಸ್ತುಗಳೆಲ್ಲವೂ ಕೊಚ್ಚಿಕೊಂಡು ಹೋಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್ ರೈಲು,-ಕೆಎಸ್‌ಆರ್‌ ಎಕ್ಸ್‌ಪ್ರೆಸ್‌ ರೈಲು, ಮಂಗಳೂರು ಸೆಂಟ್ರಲ್ - ವಿಜಯಪುರ-ಬೆಂಗಳೂರು ಸೆಂಟ್ರಲ್‌ ಸ್ಪೆಷಲ್ ಎಕ್ಸ್‌ಪ್ರೆಸ್, ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರ್ಡೇಶ್ವರ-ಎಸ್‌ಎಂವಿಟಿ ಎಕ್ಸ್‌ಪ್ರೆಸ್, ಕ್ರಾ.ಸಂ.ರಾ ಬೆಂಗಳೂರು - ಕಾರವಾರ ಪಂಚಗಂಗಾ-ಕೆಎಸ್‌ಆರ್‌ ಎಕ್ಸ್‌ಪ್ರೆಸ್, ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಎಕ್ಸ್‌ಪ್ರೆಸ್ 4,ಯಶವಂತಪುರ ಜಂಕ್ಷನ್ - ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್, ಯಶವಂತಪುರ ಜಂಕ್ಷನ್ -ಕಾರವಾರ-ಯಶವಂತಪುರ ಜಂಕ್ಷನ್‌ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಪಡಿಸಲಾಗಿದೆ.