ಹಾಥ್ರಸ್ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಭೀಕರ ಕಾಲ್ತುಳಿತ : 120 ಮಂದಿ ಮೃತ್ಯು, 25ಸಾವಿರಕ್ಕೂ ಅಧಿಕ ಮಂದಿ ಸೇರಿದ್ದ ಕಾರ್ಯಕ್ರಮ



ಲಕ್ನೋ: ಉತ್ತರಪ್ರದೇಶದ ಹಾಥ್ರಸ್ ಎಂಬಲ್ಲಿ ಮಂಗಳವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ, 108 ಮಹಿಳೆಯರು, 7 ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 120 ಮಂದಿ ಮೃತಪಟ್ಟಿದ್ದಾರೆ ಹಾಗೂ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹಾಥ್ರಸ್ ಜಿಲ್ಲೆಯ ಪುಲರಾಯ್ ಗ್ರಾಮದಲ್ಲಿ ಸ್ಥಳೀಯ ಧಾರ್ಮಿಕ ನಾಯಕ ಭೋಲೆ ಬಾಬಾ ಯಾನೆ ನಾರಾಯಣ್ ಸಾಕಾರ್ ಹರಿ ಅವರ ಗೌರವಾರ್ಥ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ. ಸತ್ಸಂಗದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಹೇಳಲಾಗಿದೆ.

ಸಮಾರಂಭ ಮುಕ್ತಾಯದ ಬಳಿಕ ಸತ್ಸಂಗದ ಸ್ಥಳದಿಂದ ನಿರ್ಗಮನದ ವೇಳೆ ಭೀಕರ ಕಾಲ್ತುಳಿತ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ವಘೋಷಿತ ಧರ್ಮಗುರು ನಾರಾಯಣ್ ಸಾಕಾರ್ ಹರಿಯವರ ಕಾರು ನಿರ್ಗಮಿಸುವವರೆಗೂ ಸ್ಥಳದಿಂದ ಭಕ್ತಾದಿಗಳು ಹೊರಹೋಗದಂತೆ ಆಯೋಜಕರು ತಡೆದಿದ್ದರು. ಇದರಿಂದಾಗಿ ಸಣ್ಣ ಪ್ರದೇಶದಲ್ಲಿ ಭಾರೀ ಜನಜಂಗುಳಿ ಜಮಾಯಿಸಿದೆ. ಧಾರ್ಮಿಕ ಗುರುವಿನ ಕಾರು ನಿರ್ಗಮಿಸುತ್ತಿದ್ದಂತೆಯೇ, ಜನರು ಒಮ್ಮೆಲೇ ಸ್ಥಳದಿಂದ ತೆರಳತೊಡಗಿದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕಾಲ್ತುಳಿತದಿಂದ ಮೃತಪಟ್ಟವರ ಮೃತದೇಹಗಳನ್ನು ಬಸ್, ಟೆಂಪೊಗಳಲ್ಲಿ ಹಾಕಿ ಸ್ಥಳೀಯ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯುತ್ತಿರುವ ದೃಶ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪೋಸ್ಟ್ ಮಾರ್ಟಂ ಕೇಂದ್ರದ ಹೊರಗಡೆ ಇರಿಸಲಾದ ಮೃತದೇಹಗಳ ಮುಂದೆ ಕುಳಿತುಕೊಂಡು ಬಂಧುಗಳು ಸಹಾಯಕ್ಕಾಗಿ ರೋದಿಸುತ್ತಿರುವ ಮನಕಲಕುವ ದೃಶ್ಯಗಳ ವೀಡಿಯೊಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ನೂರಾರು ಮಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಗಳೇ ಇಲ್ಲವೆಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿ, ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಿದವರ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹಾಥ್ರಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಈ ಸತ್ಸಂಗ್ ಖಾಸಗಿ ಕಾರ್ಯಕ್ರಮ. ಅದಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಭದ್ರತಾ ವ್ಯವಸ್ಥೆಯನ್ನೂ ಮಾಡಿತ್ತು‌. ಆದರೆ ಇತರ ವ್ಯವಸ್ಥೆಗಳನ್ನು ಸಂಘಟಕರೇ ಮಾಡಬೇಕಾಗಿತ್ತು ಎಂದು ತಿಳಿದು ಬಂದಿದೆ.