ಕಾರವಾರ: ಅಂಕೋಲಾ ಗುಡ್ಡ ಕುಸಿತ ದುರಂತದ ಕಾರ್ಯಾಚರಣೆ 12ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಲಾರಿ ಡ್ರೈವರ್ ಅರ್ಜುನ್ ವಿಚಾರದಲ್ಲಿ ಯಾವುದೇ ಫಲ ಸಿಕ್ಕಿಲ್ಲ. ಇಸ್ರೋ ಮತ್ತು ನೇವಿ ತಜ್ಞರು ನಡೆಸಿದ ಡೋಣ್ ಕ್ಯಾಮರಾ ಪರಿಶೀಲನೆಯಲ್ಲಿ ರಸ್ತೆಯಿಂದ 60 ಮೀ. ದೂರದಲ್ಲಿ ನದಿಯ ಮಧ್ಯೆ ಲಾರಿಯ ಅವಶೇಷ ಇದೆಯೆಂಬ ಮಾಹಿತಿ ದೊರಕಿದೆ. ಆದರೆ, ಭಾರೀ ಮಳೆಯ ಹಿನ್ನೆಲೆಯಲ್ಲಿ ನದಿಯಲ್ಲಿ ಪ್ರವಾಹದ ರೀತಿ ನೀರು ಹರಿಯುತ್ತಿದ್ದು, ಇದರಿಂದಾಗಿ ಸ್ಕೂಬಾ ಡೈವರ್ ಗಳು ನೀರಿನಾಳಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ.
ನೇವಿ ಮಾಹಿತಿ ಪ್ರಕಾರ, 15-20 ಅಡಿ ಆಳದಲ್ಲಿ ಲಾರಿ ಇದೆ ಎನ್ನಲಾಗುತ್ತಿದೆ. ಆದರೆ, ನೀರಿನಲ್ಲಿ ಭಾರೀ ಸೆಳೆತ ಇರುವುದು ಮತ್ತು ಮಣ್ಣು ಕಲ್ಲಿನೊಂದಿಗೆ ತೀವ್ರ ಗತಿಯಲ್ಲಿ ಸಾಗುವುದರಿಂದ ಅದರ ನಡುವೆ ಆಳಕ್ಕಿಳಿದರೂ, ಯಾವುದೇ ದೃಶ್ಯ ಕಣ್ಣಿಗೆ ಕಾಣುವುದಿಲ್ಲ ಎಂಬುದು ಸ್ಕೂಬಾ ಡೈವರ್‌ಗಳ ವಾದ. ಸಮುದ್ರದಲ್ಲಿ ಡೈವ್ ಮಾಡುವುದು ಸುಲಭ ಮತ್ತು ಆಳಕ್ಕಿಳಿದು ನೆಲವನ್ನು ನೋಡುವುದೂ ಸಾಧ್ಯ ಆದರೆ, ರಭಸದಲ್ಲಿ ಮಣ್ಣು ಕಸ, ಕಲ್ಲುಗಳೊಂದಿಗೆ ಹರಿಯುವ ನದಿ ನೀರಿನಲ್ಲಿ ಆಳಕ್ಕಿಳಿದು ಅವಶೇಷ ಪತ್ತೆ ಮಾಡವುದು ಸುಲಭದ ಮಾತಲ್ಲ. ನದಿ ನೀರಿಗಿಳಿದರೂ, ಹೊರಬರುವುದೇ ಕಷ್ಟ ಎಂದು ನೇವಿ ಅಧಿಕಾರಿಗಳು ಹೇಳುತ್ತಾರೆ.
ಇದೇ ವೇಳೆ, ಕೇರಳದ ಪಿಡಬ್ಲ್ಯುಡಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮಹಮ್ಮದ್ ರಿಯಾಸ್ ಮತ್ತು ಶಾಸಕ ಕೆಎಂ ಸಸೀಂದ್ರನ್ ದುರಂತ ನಡೆದಿರುವ ಸ್ಥಳಕ್ಕೆ ಆಗಮಿಸಿದ್ದಾರೆ. ಈಗಾಗಲೇ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕನ್ನಡ ಮತ್ತು ಮಲೆಯಾಳ ಭಾಷೆ ಅರಿತಿರುವ ಕಾರಣ ದುರಂತ ಜಾಗದಲ್ಲೇ ಬೀಡು ಬಿಟ್ಟಿದ್ದು, ಮಲೆಯಾಳಂ ವಾಹಿನಿಗಳಿಗೆ ಸ್ಥಳದಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಡೀ ಕೇರಳದಲ್ಲಿ ಜನರು ಲಾರಿ ಚಾಲಕ ಅರ್ಜುನ್ ಜೀವಂತ ಬರುವಂತೆ ಹಾರೈಸುತ್ತಿದ್ದಾರೆ. ಕೇರಳದ ಲೀಡಿಂಗ್ ಚಾನೆಲ್ಗಳು ಅರ್ಜುನ್ ನಾಪತ್ತೆ ಸುದ್ದಿಯನ್ನೇ ಇಡೀ ದಿನ ಪ್ರಮುಖವಾಗಿ ಬಿತ್ತರಿಸುತ್ತಿದ್ದು, ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದೆ.

Social Icons