ಸುರತ್ಕಲ್: ಮತ್ಸ್ಯೋದ್ಯಮ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ - 10ಕೋಟಿ ಮೌಲ್ಯದ ಮತ್ಸ್ಯೋತ್ಪನ್ನ ಬೆಂಕಿಗಾಹುತಿ



ಸುರತ್ಕಲ್: ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಅಥೆಂಟಿಕ್ ಓಷನ್ ಟ್ರಶರ್‌ ಎಂಬ ಮತ್ಸ್ಯೋದ್ಯಮ ಫ್ಯಾಕ್ಟರಿಯಲ್ಲಿ ರವಿವಾರ ಮಧ್ಯಾಹ್ನ ಆಕಸ್ಮಿಕ ಅಗ್ನಿಅವಘಡ ಹತ್ತಾರು ಕೋಟಿ ರೂಪಾಯಿಯ ಮತ್ಸೋತ್ಪನ್ನ ಬೆಂಕಿಗಾಹುತಿಯಾಗಿದೆ. ಕಂಪೆನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೌಕರರು ಯಾರು ಇರಲಿಲ್ಲ. ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಅಥೆಂಟಿಕ್ ಓಷನ್ ಟ್ರೆಶರ್ ಕಂಪೆನಿ ಮೀನನ್ನು ಸ್ವಚ್ಚಗೊಳಿಸಿ ಮಾಂಸದ ರೂಪಕ್ಕೆ ಪರಿವರ್ತಿಸಿ 10 ಕೆ.ಜಿ. ಪ್ಯಾಕೆಟ್‌ ರೂಪಕ್ಕೆ ತಂದು ಅದನ್ನು ವಿದೇಶಗಳಿಗೆ ರಫ್ತು ಮಾಡುವ ಕಂಪೆನಿಯಾಗಿದೆ. ಇಲ್ಲಿನ ಕೋಲ್ಡ್ ಸ್ಟೋರ್ ಸೆಕ್ಷನ್ ಹಾಗೂ ಕಟ್ಟಿಂಗ್ ಸೆಕ್ಷನ್‌ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್‌ಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶದೆತ್ತರಕ್ಕೆ ಹೊಗೆ ಉಗುಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಆದರೆ ಅಗ್ನಿ ಅವಘಡದಿಂದ ಸುಮಾರು 10 ಕೋಟಿ ರೂ. ಮೌಲ್ಯದ ಮೀನಿನ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಕೈಗಾರಿಕಾವಲಯ ಎಂಆರ್ ಪಿಎಲ್, ಗೇಲ್ ಇಂಡಿಯಾ ಕಂಪೆನಿಗಳ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.