ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಬರುವ ವಾಹನ ಸವಾರರ ವಿರುದ್ಧ ಬಿಎನ್‌ಎಸ್ 281ರ ಅನ್ವಯ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ 184 ಅನ್ವಯ ಎಫ್ ಐಆರ್ ದಾಖಲಿಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಅವರು ಪೊಲೀಸರಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಅಧಿಕ ಪ್ರಖರ ಬೆಳಕು ಹೊರಸೂಸುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ಲೈಟ್ ಅಳವಡಿಕೆ ಮಾಡಿರುವ ವಾಹನಗಳ ವಿರುದ್ಧ ರಾಜ್ಯ ವ್ಯಾಪಿ ಕೇಸ್ ದಾಖಲಿಸಲಾಗುತ್ತಿದೆ. ಇದೀಗ ವಿರುದ್ದ ದಿಕ್ಕು, ಫುಟ್‌ಪಾತ್ ಮೇಲೆ ವಾಹನ ಚಾಲನೆ ಸೇರಿದಂತೆ ದೋಷಪೂರಿತ ನಂಬರ್ ಪ್ಲೇಟ್‌ಗಳ ವಿರುದ್ಧ ಆ.1ರಿಂದ ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಬೆಂಗಳೂರು ನಗರ ಸೇರಿ ನಗರ ಪ್ರದೇಶದಲ್ಲಿ ಫುಟ್‌ಪಾತ್ ಮೇಲೆ ದ್ವಿಚಕ್ರ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೂ ಮೊದಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಸಾಮಾಜಿಕ ಜಾಲತಾಣ, ಕರಪತ್ರ ವಿತರಣೆ ಮತ್ತು ಧ್ವನಿ ವರ್ಧಕಗಳಲ್ಲಿ ತಿಳಿವಳಿಕೆ ನೀಡಬೇಕು. ಬಳಿಕ ಆ.1ರಿಂದ ವಿಶೇಷ ಕಾರ್ಯಾಚರಣೆ ಕೈಗೊಂಡು ಮಾಸಾಂತ್ಯಕ್ಕೆ ವರದಿ ಸಲ್ಲಿಸುವಂತೆ ಎಲ್ಲ ಘಟಕಗಳಿಗೆ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

Social Icons