ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯಲ್ಲಿ ಭಾರತೀಯ ರೈಲ್ವೆಯ ಯಶಸ್ವಿ ಟ್ರಯಲ್ ರನ್ | ಅದ್ಭುತ Video Viral

ಜಮ್ಮು ಕಾಶ್ಮೀರ: ರೈಲ್ವೇ ಇಲಾಖೆ ಮತ್ತೊಂದು ಮಹತ್ತರ ಸಾಧನೆ ಮಾಡಿದೆ. ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಮ್ಮು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರೈಲ್ವೆ ಬ್ರಿಡ್ಜ್ ಮೇಲೆ ಭಾರತೀಯ ರೈಲ್ವೆ ಪರೀಕ್ಷಾರ್ಥವಾಗಿ ರೈಲನ್ನು ಓಡಿಸಿ ಯಶಸ್ವಿಯಾಗಿದೆ. ರೈಲ್ವೆಯ ಈ ಯಶಸ್ವಿ ಟ್ರಯಲ್ ರನ್‌ನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಮೋಹಕವಾಗಿದೆ.






ನೂತನ ರೈಲ್ವೇ ಸೇತುವೆಯನ್ನು ಜಮ್ಮುಕಾಶ್ಮೀರದ ರಾಂಬನ್ ಜಿಲ್ಲೆಯ ಸಂಗಲ್ದನ್ ಮತ್ತು ರಿಯಾಸಿ ನಡುವೆ ನಿರ್ಮಿಸಲಾಗಿದೆ. ಪ್ರಯೋಗಾರ್ಥ ಓಡಾಟದಲ್ಲಿ ರೈಲು ಚೆನಾಬ್ ನದಿಯ ಮೇಲೆ ನಿರ್ಮಿತವಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಮೇಲೆ ಸಾಗುವುದನ್ನು ಕಾಣಬಹುದಾಗಿದೆ. ಇದರ ಹಿಂಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಂದರವಾದ ಪರ್ವತ ಪ್ರದೇಶಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. 

                    

ಈ ಸೇತುವೆಯು ಚೆನಾಬ್ ನದಿಯ ಮೇಲೆ 359 ಮೀಟರ್ (ಸುಮಾರು 109 ಅಡಿ) ಎತ್ತರದಲ್ಲಿ ನಿರ್ಮಿಸಿದ ಇಂಜಿನಿಯರಿಂಗ್ ಅದ್ಭುತವಾಗಿದ್ದು, ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಸುಮಾರು 35 ಮೀಟರ್ ಎತ್ತರವಾಗಿದೆ. ಇದನ್ನು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲ್ ಲಿಂಕ್ (USBRL) ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದು ವರ್ಷಾಂತ್ಯದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.



ಈ ವಿಡಿಯೋವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಕೂಡ  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂಗಲ್ದನ್ ಹಾಗೂ ರಿಯಾಸಿ ನಡುವೆ ಜಮ್ಮು ಕಾಶ್ಮೀರದ ಯುಎಸ್‌ಬಿಆರ್‌ಎಲ್ ಪ್ರಾಜೆಕ್ಟ್‌ ರೈಲಿನ ಯಶಸ್ವಿ ಟ್ರಯಲ್ ರನ್ ಎಂದು ಬರೆದುಕೊಂಡಿದ್ದಾರೆ.