ಎರಡು ಕಾಲಿನಲ್ಲಿ ನಿಂತು ಮರದಿಂದ ಹಲಸಿನ ಹಣ್ಣು ಕಿತ್ತ ಆನೆ!| Video Viral

ಆನೆಗಳು ಜನವಸತಿ ಪ್ರದೇಶಕ್ಕೆ ಬರುವ ಸನ್ನಿವೇಶಗಳು ಬಹಳಷ್ಟು ಹೆಚ್ಚುತ್ತಿವೆ. ಅನೇಕ ಆನೆಗಳು ಆಹಾರ ಅರಸಿಕೊಂಡು ನಾಡಿನತ್ತ ಬಂದರೆ ಇನ್ನು ಕೆಲವು ಆನೆಗಳು ದಿಕ್ಕುತಪ್ಪಿ ಬರುತ್ತವೆ. ಹೆಚ್ಚಿನ ಆನೆಗಳು ಮನುಷ್ಯರಿಗೆ ಏನೂ ಅಪಾಯ ಮಾಡದೆ ತಮ್ಮ ಹೊಟ್ಟೆ ತುಂಬಿಸಿಕೊ0ಡು ಹೊರಟುಹೋಗುತ್ತವೆ. ಈ ಸಂದರ್ಭದಲ್ಲಿ ಆನೆಗಳ ಕೆಲವೊಂದು ಚಟುವಟಿಕೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತವೆ. ಇದೀಗ ಆನೆಯೊಂದು ಹಲಸಿನ ಮರದಿಂದ ಹಲಸಿನ ಹಣ್ಣು ಕೀಳುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 


ದೇಹದಲ್ಲಿ ದೈತ್ಯಜೀವಿಗಳಾದರೂ ಅತ್ಯಂತ ಮುಗ್ಧ ಜೀವಿಯಾಗಿರುವ ಆನೆಗಳಿಗೆ ಕಬ್ಬು, ಹಲಸಿನ ಹಣ್ಣು ಸೇರಿ ಸಾಕಷ್ಟು ಇಷ್ಟದ ಆಹಾರಗಳಿವೆ. ಇವುಗಳನ್ನು ಕಂಡರೆ ಅವುಗಳು ತಿನ್ನದೇ ಬಿಡುವುದಿಲ್ಲ. ಜೊತೆಗೆ ದಾರಿಗೆ ಅಡ್ಡ ನಿಂತು ಬಾಳೆ ಹಣ್ಣು ಸೇರಿ ಇತರ ತಿನಿಸುಗಳನ್ನು ತಿಂದು ಹೋಗುವ ಆನೆಗಳನ್ನೂ ಕಂಡಿರಬಹುದು. ಅದೆಷ್ಟು ಎತ್ತರದಲ್ಲಿ ಇದ್ದರೂ ಸಾಧ್ಯವಾದಷ್ಟು ಇವುಗಳನ್ನು ತಿನ್ನಲು ಇವುಗಳು ಪಯತ್ನಿಸುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. 


ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಜನವಸತಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಆನೆ ಸಾಗುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಸಾಗುತ್ತಿರುವಾಗ ಈ ಆನೆಗೆ ಹಲಸಿನ ಮರವೊಂದು ಕಾಣಿಸುತ್ತದೆ. ಹಲಸಿನ ಕಾಯಿ ಕೂಡಾ ಕಣ್ಣಿಗೆ ಬೀಳುತ್ತವೆ. ಹೀಗೆ ಇದನ್ನು ಕಂಡ ಕೂಡಲೇ ಕಾರ್ಯಪ್ರವೃತ್ತವಾದ ಈ ಆನೆ ಅಲ್ಲೇ ಇದ್ದ ಕಟ್ಟಡಕ್ಕೆ ತನ್ನ ಮುಂಗಾಲಿನಲ್ಲಿ ಬಲ ಕೊಟ್ಟು, ಎರಡು ಕಾಲಿನಲ್ಲಿ ನಿಂತು, ಸೊಂಡಿಲನ್ನು ಎತ್ತರಕ್ಕೆ ಎತ್ತರಿಸಿ ಹಣ್ಣನ್ನು ಕೆಳಗೆ ಬೀಳಿಸಿದೆ. ಈ ದೃಶ್ಯವನ್ನು ಅಲ್ಲೇ ಇದ್ದವರು ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.