Train accident ಪ್ಯಾಸೆಂಜರ್- ಗೂಡ್ಸ್ ರೈಲು ಢಿಕ್ಕಿ: 5 ಮಂದಿ ಮೃತ್ಯು: 30ಕ್ಕೂ ಹೆಚ್ಚು ಮಂದಿಗೆ ಗಾಯ




ಕಲ್ಕತ್ತಾ/ ಪಶ್ಚಿಮ ಬಂಗಾಳ: ಪ್ಯಾಸೆಂಜರ್ ರೈಲೊಂದು ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದು ಕನಿಷ್ಠ ಐವರು ಮೃತಪಟ್ಟಿದ್ದೂ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ನ್ಯೂ ಜಲ್‌ಪೈಗುರಿಯಲ್ಲಿ ನಡೆದಿದೆ.


ಅಗರ್ತಲಾದಿಂದ ಸೀಲ್ದಾಗೆ ಹೋಗುತ್ತಿದ್ದ ಕಂಚೇನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸೋಮವಾರ ಬೆಳಗ್ಗೆ ಜಲ್‌ಪೈಗುರಿಯಲ್ಲಿ ಗೂಡ್ಸ್‌ ರೈಲು ಢಿಕ್ಕಿ ಹೊಡೆದಿದೆ.


ಢಿಕ್ಕಿಯಾದ ರಭಸಕ್ಕೆ ಕಂಚೇನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿನ ಮೂರು ಬೋಗಿಗಳು ಹಳಿತಪ್ಪಿದ್ದು, ಐವರು ಮೃತಪಟ್ಟಿದ್ದೂ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.


ಘಟನಾ ಸ್ಥಳಕ್ಕೆ ಬೇಕಾದ ಅಗತ್ಯ ನೆರವುಗಳನ್ನು ವಿಸ್ತರಿಸಲಾಗಿದ್ದು, ರಕ್ಷಣಾ ಕಾರ್ಯವೂ ಭರದಿಂದ ನಡೆಯುತ್ತಿದೆ. ಅಲ್ಲದೇ ಸಹಾಯವಾಣಿಯನ್ನೂ ಆರಂಭಿಸಲಾಗಿದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇನ್ನು ಘಟನೆ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶೋಕ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯರು ರಕ್ಷಣಾ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.