ಮಂಗಳೂರು: ಪಿಡಬ್ಲ್ಯುಡಿ ಕಂಟ್ರ್ಯಾಕ್ಟರ್ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ



ಮಂಗಳೂರು: ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಕಂಟ್ರ್ಯಾಕ್ಟರ್ ಮನೆಗೆ ನುಗ್ಗಿರುವ ತಂಡವೊಂದು ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ನಗ - ನಗದು ದರೋಡೆ ನಡೆಸಿದೆ.

ಪಿಡಬ್ಲ್ಯುಡಿ ಕಂಟ್ರ್ಯಾಕ್ಟರ್ ಉಳಾಯಿಬೆಟ್ಟುವಿನ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ‌. ಮುಖಕ್ಕೆ ಮಾಸ್ಕ್ ಧರಿಸಿದ್ದ 8-9 ಮಂದಿಯಿದ್ದ ತಂಡವೊಂದು ಶುಕ್ರವಾರ ರಾತ್ರಿ 8ಗಂಟೆಗೆ ಮನೆಗೆ ನುಗ್ಗಿದೆ. ಬಳಿಕ ಮನೆಯವರಿಗೆ ಚೂರಿ ತೋರಿಸಿ ಬೆದರಿಸಿದೆ‌. ಬಳಿಕ ಮನೆಯವರನ್ನೆಲ್ಲಾ ಬೆಡ್‌ಶೀಟ್ ನಲ್ಲಿ ಕಟ್ಟಿಹಾಕಿದೆ. ಈ ವೇಳೆ ಪದ್ಮನಾಭ ಕೋಟ್ಯಾನ್ ಅವರ ಬಲಗೈಗೆ ಚೂರಿಯಿಂದ ಇರಿಯಲಾಗಿದೆ.

ನಮ್ಮೊಂದಿಗೆ ಎಲ್ಲರೂ ಸಹರಿಸಬೇಕು‌. ಮನೆಯಲ್ಲಿ ಹಣವಿದೆಯೇ ಎಂದು ನೋಡುತ್ತೇವೆ ಎಂದು ದರೋಡೆಕೋರ ತಂಡ ಮನೆಯೆಲ್ಲಾ ಜಾಲಾಡಿ ಕೈಗೆ ಸಿಕ್ಕಿದ ಹಣ , ಒಡವೆಗಳನ್ನು ದೋಚಿ ಅಲ್ಲಿಂದ ಕಾಲ್ಕಿತ್ತಿದೆ‌. ಹೋಗುವಾಗ ಮನೆಯ ಮಾಲಕ ಪದ್ಮನಾಭ ಕೋಟ್ಯಾನ್ ಅವರ ವಾಹನವನ್ನು ತೆಗೆದುಕೊಂಡು ಹೋಗಿದೆ. ಆದರೆ ಮನೆಯಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ಇಟ್ಟು ತಂಡ ಪರಾರಿಯಾಗಿದೆ‌. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.