ಹೀಗಿರಬೇಕು ನೋಡಿ ಬೆಳೆಯುವ ಛಲ| ಅಪ್ಪ ವೇಟರ್‌ ಆಗಿ ಕೆಲಸ ಮಾಡಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ| Suniel Shetty

 ಮುಂಬೈ: ಯಾರೇ ಆಗಲಿ ಕಷ್ಟವನ್ನು ಎದುರಿಸಿ ಬೆಳೆಯಬೇಕು, ಬೆಳೆದು ಸಾಧನೆ ಮಾಡಬೇಕು. ಈ ಮಾತಿಗೆ ಲಕ್ಷಾಂತರ ನಿದರ್ಶನಗಳು ಸಿಗುತ್ತವೆ. ಈ ಮಾತಿಗೆ ಬಾಲಿವುಡ್​ನಲ್ಲಿ ತನ್ನದೇ ಆಗಿರುವ ಛಾಪು ಮೂಡಿಸಿರುವ ಸುನೀಲ್‌ ಶೆಟ್ಟಿ  ಉದಾಹರಣೆಯಾಗಿದ್ದಾರೆ. ಮುಂಬೈನಲ್ಲಿ ತಮ್ಮ ತಂದೆ ವೀರಪ್ಪ ಶೆಟ್ಟಿ  ಅವರು ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಮಾಲೀಕರಾಗಿದ್ದಾರೆ.



ತಮ್ಮ ಮನೆಯಲ್ಲಿದ್ದ ಬಡತನ, ಹೆಚ್ಚಿದ ಜವಾಬ್ದಾರಿಗಳಿಂದಾಗಿ ವೀರಪ್ಪ ಶೆಟ್ಟಿ ಅವರು ಹೊಟ್ಟೆಪಾಡಿಗಾಗಿ ಮುಂಬೈಗೆ ತೆರಳಿದ್ದರು. ಮುಂಬೈನ ಖಂಡಾಲದಲ್ಲಿರುವ ರೆಸ್ಟೋರೆಂಟ್‌ ಒಂದರಲ್ಲಿ ಅವರು ವೇಟರ್‌ ಆಗಿ ಸೇರಿಕೊಂಡು, ಬಳಿಕ ಅದರಲ್ಲಿಯೇ ಮ್ಯಾನೇಜರ್‌ ಆಗಿದ್ದರು. ಈಗ ರೆಸ್ಟೋರೆಂಟ್‌ನ ಸೇರಿ ಮೂರು ಕಟ್ಟಡಗಳು ಇರುವ ಜಾಗವು ಫಾರ್ಮ್‌ಹೌಸ್‌ ಆಗಿ ಬದಲಾಗಿದ್ದು, ಮೂರೂ ಕಟ್ಟಡಗಳಿಗೆ ಸುನೀಲ್‌ ಶೆಟ್ಟಿ ಅವರೇ ಮಾಲೀಕರಾಗಿದ್ದಾರೆ. ಸುಮಾರು 83 ಕೋಟಿ ರೂ. ಕೊಟ್ಟು ಫಾರ್ಮ್‌ಹೌಸ್‌ಅನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಈ ಘಟ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ತಂದೆಯ ಬಗ್ಗೆ ಮಾತುಗಳನ್ನು ಉಲ್ಲೇಖಿಸಿರುವ ಸುನೀಲ್ ಶೆಟ್ಟಿ, ನನ್ನ ತಂದೆ ಬಡವರಾಗಿದ್ದರು. ಬಾಲ್ಯದಲ್ಲಿಯೇ ಅವರು ತಂದೆಯನ್ನು ಕಳೆದುಕೊಂಡಿದ್ದರು. 9 ವರ್ಷದವರಿದ್ದಾಗಲೇ ಅವರು ಮಂಗಳೂರಿನಿಂದ ಮುಂಬೈಗೆ ಬಂದರು. ಇಲ್ಲಿ ದಕ್ಷಿಣ ಭಾರತದ ರೆಸ್ಟೋರೆಂಟ್‌ನಲ್ಲಿ ಟೇಬಲ್‌ ಕ್ಲೀನ್‌ ಮಾಡುವುದು, ಊಟ-ತಿಂಡಿ ಸರಬರಾಜು ಮಾಡುವುದು ಅವರ ಕೆಲಸವಾಗಿತ್ತು. ಬಳಿಕ ಅವರು ಮ್ಯಾನೇಜರ್‌ ಕೂಡ ಆದರು. ಈಗ ರೆಸ್ಟೋರೆಂಟ್‌ ಸೇರಿ ಮೂರು ಕಟ್ಟಡಗಳನ್ನು ನಾನು ಖರೀದಿಸಿದ್ದೇನೆ ಎಂಬುದಾಗಿ ಬಾಲಿವುಡ್‌ ನಟ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ನನ್ನ ತಂದೆ ತುಂಬ ಸಂಭಾವಿತ ವ್ಯಕ್ತಿಯಾಗಿದ್ದರು. ಅವರು ಮಕ್ಕಳಿಗೂ ಏನೂ ಎನ್ನುತ್ತಿರಲಿಲ್ಲ. ಅವರು ಮ್ಯಾನೇಜರ್‌ ಆದಾಗಲೂ ಸಿಬ್ಬಂದಿಗೆ ಒಂದು ಮಾತೂ ಅನ್ನುತ್ತಿರಲಿಲ್ಲ. ಆದರೆ, ನಮ್ಮ ಬಗ್ಗೆ, ಅವರ ಸಿಬ್ಬಂದಿ ಬಗ್ಗೆ ಯಾರಾದರೂ ಒಂದು ಮಾತು ಆಡಿದರೂ ಅವರು ಸಹಿಸಿಕೊಳ್ಳುತ್ತಿರಲಿಲ್ಲ ಎಂದು ಸುನೀಲ್‌ ಶೆಟ್ಟಿ ಸ್ಮರಿಸಿದ್ದಾರೆ.

ಸುನೀಲ್‌ ಶೆಟ್ಟಿ ಅವರ ತಂದೆ ವೀರಪ್ಪ ಶೆಟ್ಟಿ 2017ರಲ್ಲಿ ನಿಧನರಾಗಿದ್ದಾರೆ. ಆದರೂ ಸುನೀಲ್ ಶೆಟ್ಟಿ ಈಗ ತಮ್ಮ ತಂದೆಯ ನೆನಪಿನಲ್ಲಿ ಮಾಡಿರುವ ಕೆಲಸ ಭಾರೀ ಸಂಚಲನ ಉಂಟುಮಾಡಿದೆ. 1992ರಲ್ಲಿ ಬಾಲಿವುಡ್‌ ಪ್ರವೇಶಿಸಿದ ಸುನೀಲ್‌ ಶೆಟ್ಟಿ ಇಂದು ದೊಡ್ಡ ಸ್ಟಾರ್ ನಟ. ಧಡಕನ್‌, ಮೊಹ್ರಾ, ಬಾರ್ಡರ್‌, ಹೇರಾ ಫೇರಿ, ದಿಲ್ವಾಲೆ ಸೇರಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅವರು ಸುದೀಪ್‌ ಅಭಿನಯದ ಪೈಲ್ವಾನ್‌ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿ ಗಮನ ಸೆಳೆದವರು. ಜೊತೆಗೆ ಹಲವು ಜಾಹೀರಾತಿನಲ್ಲೂ ಮಿಂಚಿದ್ದಾರೆ.