SSLC ಪಾಸಾದವರಿಗೆ ಉದ್ಯೋಗಾವಕಾಶ| ಮಂಗಳೂರು ಸಹಿತ ವಿವಿಧ ಜಿಲ್ಲೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ

ಬೆಂಗಳೂರು: ಎಸೆಸೆಲ್ಸಿ ಪಾಸಾಗಿರುವವರಿಗೆ ಅತ್ಯುತ್ತಮ ಉದ್ಯೋಗಾವಕಾಶ ಸಜ್ಜಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಭಾಗವಾಗಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯಲ್ಲಿ (ಸ್ಪೆಷಲ್ RPC) 1500 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅದರಂತೆ 1500 ಹುದ್ದೆಗಳಲ್ಲಿ 886 ಹುದ್ದೆಗಳು ಕಲ್ಯಾಣ- ಕರ್ನಾಟಕೇತರ ಹುದ್ದೆಗಳಾಗಿದ್ದು, ಕಲ್ಯಾಣ ಕರ್ನಾಟಕ ವೃಂದಕ್ಕೆ 614 ಹುದ್ದೆಗಳನ್ನು ಮೀಸಲಿಡಲಾಗಿದೆ.  



ಒಟ್ಟು 1,500 ಹುದ್ದೆಗಳಲ್ಲಿ 30 ಹುದ್ದೆಗಳನ್ನು ಪ್ರತಿಭಾವಂತ ಕ್ರೀಡಾ ಪಟುಗಳಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ 12 ಸ್ಥಾನ ಕಲ್ಯಾಣ- ಕರ್ನಾಟಕದ ಅಭ್ಯರ್ಥಿಗಳಿಗಾಗಿ ನಿಗದಿ ಮಾಡಲಾಗಿದೆ. ಮಂಗಳೂರು, ಶಿವಮೊಗ್ಗ, ಶಿಗ್ಗಾವಿ, ಹಾಸನ, ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ತುಮಕೂರು, ಮುನಿರಾಬಾದ್ ಮೊದಲಾದ ಕಡೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಯಲಿದೆ. 

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯ (ಸ್ಪೆಷಲ್ ಆರ್‌ಪಿಸಿ) ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ ದೈಹಿಕ ಅರ್ಹತೆ ಉಳ್ಳವರಾಗಿರಬೇಕು. ವಯೋಮಿತಿ ವಿವರ ನೋಡುವುದಾದರೆ ಕೆಎಸ್‌ಆರ್‌ಪಿ ಮತ್ತು ಎಸ್‌ಆರ್‌ಪಿಸಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. 

ವಿದ್ಯಾರ್ಹತೆ ಏನು?

ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳು, ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ ಅರ್ಹತೆಗಳೇನು?

ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದAದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನಗಳು ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳನ್ನು ಹಂತ ಹಂತವಾಗಿ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖವಾಗಿ ಈ ಕೆಳಗಿನ 3ಹಂತದ ಪರೀಕ್ಷೆಗಳು ಇರುತ್ತವೆ.

1. ಸಹಿಷ್ಣುತಾ ಪರೀಕ್ಷೆ : ಉದ್ದ ಜಿಗಿತ / ಎತ್ತರ ಜಿಗಿತ / ಗುಂಡು ಎಸೆತ / ಓಟ.

2. ದೈಹಿಕ ಸಾಮರ್ಥ್ಯ ಪರೀಕ್ಷೆ : ಕನಿಷ್ಠ ಎತ್ತರ / ಎದೆ ಸುತ್ತಳತೆ.

3. ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ : ಬಹು ಆಯ್ಕೆ ಉತ್ತರಗಳ, ಲಿಖಿತ ಪರೀಕ್ಷೆ.

ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂದರೆ ಮೊದಲು ಸಹಿಷ್ಣುತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಬೇಕಾಗಿರುತ್ತದೆ. ಅವರಿಗೆ ಈ ಕೆಳಗಿನಂತೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ವಿಧಾನ

100 ಅಂಕಗಳಿಗೆ ಪ್ರಶ್ನೆಗಳನ್ನು ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಕೇಳಲಾಗಿರುತ್ತದೆ. ಪ್ರತಿ ಪ್ರಶ್ನೆಗೆ 4ಉತ್ತರಗಳನ್ನು ನೀಡಿದ್ದು, ಒಂದು ಸರಿ ಉತ್ತರ ಆಯ್ಕೆ ಮಾಡಬೇಕು. ಪ್ರತಿ ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. ಪರೀಕ್ಷೆಯ ಅವಧಿ 2 ಗಂಟೆ ಇರುತ್ತದೆ.

ಪಠ್ಯ ವಿಷಯಗಳು

ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ ಕುರಿತ ವಸ್ತುನಿಷ್ಠ (ಆಬ್ಜೆಕ್ಟೀವ್) ಮತ್ತು ಬಹುವಿಧ ಆಯ್ಕೆ ಮಾದರಿಯದ್ದಾಗಿರುತ್ತವೆ. ಸಾಮಾನ್ಯ ಜ್ಞಾನದಲ್ಲಿ ಸಾಮಾನ್ಯ ಅಧ್ಯಯನ, ನೀತಿ ಶಿಕ್ಷಣ, ಭೂಗೋಳ, ವಿಜ್ಞಾನ, ಭಾರತದ ಸ್ವಾತಂತ್ರ‍್ಯ ಸಂಗ್ರಾಮ, ಭಾರತದ ಸಂವಿಧಾನ, ಆಧುನಿಕ ಭಾರತದ ಇತಿಹಾಸ, ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಾತ್ಮಕ ತತ್ವಗಳ ಕುರಿತು ಪ್ರಶ್ನೆಗಳಿರುತ್ತವೆ. ಸಾಮಾನ್ಯ ಮಾನಸಿಕ ಸಾಮರ್ಥ್ಯದಲ್ಲಿ ಗಣಕಾ ಕೌಶಲ್ಯ ಮತ್ತು ಪ್ರಾದೇಶಿಕ ಮನ್ನಣೆ ಕೌಶಲ್ಯಗಳ ಕುರಿತು ಪ್ರಶ್ನೆ ಕೇಳಲಾಗುತ್ತದೆ.