ಅದೊಂದು ಕಾಲವಿತ್ತು. ಚಲನಚಿತ್ರಗಳು ಜನರ ಜೀವನವನ್ನೇ ಬದಲಿಸುತ್ತಿದ್ದವು. ಸಿನಿಮಾದಲ್ಲಿ ಅಡ್ಡಹಾದಿ ಇಟ್ಟ ನಟ ಮನಃಪರಿವರ್ತನೆಗೊಂಡು ಉತ್ತಮ ನಾಗರಿಕನಾಗಿ, ಆದರ್ಶ ವ್ಯಕ್ತಿಯಾಗಿ ರೂಪುಗೊಂಡಿರುವುದನ್ನು ನೋಡಿ ನಿಜಜೀವನದಲ್ಲೂ ಅದೆಷ್ಟೋ ಮಂದಿ ಬದಲಾಗಿದ್ದರು. ಕೆಟ್ಟಹಾದಿಯಿಂದ ಒಳ್ಳೆಯ ದಾರಿಗೆ ಬಂದಿದ್ದರು. ಸಜ್ಜನಿಕೆಯ ಜೀವನ ರೂಢಿಸಿಕೊಂಡಿದ್ದರು.
ಆ ಕಾಲದಲ್ಲಿ ಸಿನಿಮಾ ನಟರ ಜೀವನವು ಕೂಡ ಜನಸಾಮಾನ್ಯರಿಗೆ ಆದರ್ಶವಾಗಿತ್ತು. ನಟರ ನಡೆ, ನುಡಿ ಆಚಾರಗಳನ್ನು ಪಾಲಿಸುತ್ತಿದ್ದರು. ಅವರ ಮಾತುಗಳಿಗೆ ಸಮಾಜದಲ್ಲಿ ಬದಲಾವಣೆ ತರುವ ಶಕ್ತಿಯಿತ್ತು. ಇದು ಸಮಾಜದಲ್ಲಿ ಅನೇಕ ಸ್ಥಿತ್ಯಂತರಗಳನ್ನೂ ಉಂಟುಮಾಡಿರುವ ನಿದರ್ಶನಗಳು ಇವೆ.
ಆದರೆ ಇಂದು ಪರಿಸ್ಥಿತಿ ಹೇಗೆ ಬದಲಾಗಿದೆ? ಒಂದಷ್ಟು ಸದಭಿರುಚಿಯ, ಸಾಮಾಜಿಕ ಪರಿವರ್ತನೆಯ ಸಂದೇಶ ಸಾರುವ ಸಿನಿಮಾಗಳ ಕೊರತೆಯನ್ನು ನಾವು ಕಾಣುತ್ತಿದ್ದೇವೆ. ಇದರಲ್ಲಿ ಬದಲಾದ ಪ್ರೇಕ್ಷಕ ಪ್ರಭುವಿನ ಟೇಸ್ಟ್‍ನ ಕೊಡುಗೆಯೂ ಇದೆ. ಹಾಗೆಂದ ಮಾತ್ರಕ್ಕೆ ಸಿನಿಮಾಗಳು ಕೇವಲ ನಾಯಕ ನಟ ನಟಿಯರು, ನಿರ್ಮಾಪಕರು ಕೇವಲ ದುಡ್ಡು ಮಾಡುವುದಕ್ಕೆ ಇರುವ ಸಾಧನ ಎಂದುಕೊಂಡರೆ ತಪ್ಪಾಗುತ್ತದೆ. ಇಂದಿಗೂ ಕಮರ್ಷಿಯಲ್ ಎಲಿಮೆಂಟ್‍ಗಳ ನಡುವೆ ಒಂದಷ್ಟು ಸಮಾಜದಲ್ಲಿ ಜಾಗೃತಿ ಮೂಡಿಸುವ, ಸಾಮಾಜಿಕ ಆಧುನಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸುವ ಸಿನಿಮಾಗಳೂ ಬರುತ್ತಿವೆ. ಆದರೆ ತೆರೆಯ ಮೇಲೆ ನಾಯಕರಾಗಿ ಮಿಂಚಿದವರು ನಿಜ ಜೀವನದಲ್ಲಿ ಖಳನಾಯಕರಾಗುತ್ತಿದ್ದಾರೆ.
ನಟರು ಮಾಡುವ ಪಾತ್ರಗಳು, ಹಾಕುವ ವೇಷಗಳು, ಯಾರೋ ಬರೆದುಕೊಟ್ಟದ್ದನ್ನು ಹೊಡೆಯುವ ಡೈಲಾಗ್‍ಗಳು ನಮಗೆ ಅಪ್ಯಾಯಮಾನವಾಗಿರುತ್ತವೆ. ಹಾಗೆಂದಾಗ ಅದರ ಹೊರತಾಗಿ ನಿಜಜೀವನದಲ್ಲಿ ಅವರಿಂದ ಅನುಸರಿಸಲು ಯೋಗ್ಯವಾದ ಯಾವುದೂ ಹೆಚ್ಚಾಗಿ ಕಂಡುಬರುವುದಿಲ್ಲ. ಇಲ್ಲವೆಂದಲ್ಲ, ಅಪರೂಪ. ಅವು ಅವರು ಹಣಕ್ಕಾಗಿಯೋ, ತಮ್ಮ ಮನಸ್ಸಂತೋಷಕ್ಕಾಗಿಯೋ, ಚಲಾವಣೆಗೆಗಾಗಿಯೋ ಮಾಡುವ ಕ್ಷಣಿಕ ಪಾತ್ರಗಳನ್ನೇ ಅವರ ನಿಜ ವ್ಯಕ್ತಿತ್ವವೆಂದು ಭಾವಿಸುವುದು ದುರಂತ. ಸಿನಿಮಾಗಳಲ್ಲಿ ಸಾಲು ಸಾಲು ಮಾಸ್ ಡೈಲಾಗ್‍ಗಳನ್ನು ಹೊಡೆದು ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಾಯಕ ನಟ, ನಟಿಯರು ವೈಯಕ್ತಿಕ ಬದುಕಿನಲ್ಲಿ ತಾವು ಸಿನಿಮಾಗಳಲ್ಲಿ ನೀಡಿದ ಸಂದೇಶಗಳನ್ನು ಅದೆಷ್ಟರ ಮಟ್ಟಿಗೆ ಪಾಲಿಸಲು ಶಕ್ತರಾಗಿದ್ದಾರೆ ಎನ್ನುವುದನ್ನು ಇಂದಿನ ವಿದ್ಯಮಾನಗಳಲ್ಲಿ ನಿಚ್ಚಳವಾಗಿ ಗಮನಿಸಬಹುದು.
ಈ ನಡುವೆ ಒಂದು ವರ್ಗ ನಮ್ಮ ನೆಚ್ಚಿನ ನಾಯಕ ತಪ್ಪೇ ಮಾಡಿಲ್ಲ ಎಂದು ವಾದಿಸುತ್ತಲೂ ಇದೆ. ಅದು ಸ್ವಾಭಾವಿಕ ಕೂಡ. ಅಭಿಮಾನವನ್ನು ಅಂಧವಾಗಿ ಹೊಂದಿರುವವರಿಗೆ ತಮ್ಮ ನಾಯಕ ಏನೇ ತಪ್ಪು ಮಾಡಿದರೂ ಅದು ಗೋಚರಿಸುವುದೇ ಇಲ್ಲ. ಆದರೆ ಇಲ್ಲಿ ಜವಾಬ್ದಾರಿ ಇರುವುದು ತಪ್ಪು ಮಾಡಿರುವ ನಾಯಕ ನಟರಿಗೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಕಾನೂನು ಪ್ರಕಾರ ಎದುರಿಸಬೇಕಾದ ಶಿಕ್ಷೆಯನ್ನು ಎದುರಿಸಿದರೆ ಅದು ಸಿನಿಮಾದಲ್ಲಿ ಮಾಡುವ ಪಾತ್ರಕ್ಕೆ ನಿಜ ಜೀವನದಲ್ಲಿ ನ್ಯಾಯ ತುಂಬಿದಂತೆ. ಆದರೆ ಇಲ್ಲಿ ತಪ್ಪು ಯಾರದ್ದು ಎನ್ನುವುದಕ್ಕಿಂತ ಇಂತಹ ಪರಿಸ್ಥಿತಿ ಯಾಕೆ ಉದ್ಭವ ಆಯಿತು ಎನ್ನುವುದನ್ನು ಕೂಡ ವಿಶ್ಲೇಷಣೆ ಮಾಡಬೇಕಿದೆ.
ಅಭಿಮಾನಿಗಳ ಅಭಿಮಾನದ ಅತಿರೇಕ, ಮಿತಿಮೀರಿ ಬರುವ ಸಂಭಾವನೆ ಇದೆಲ್ಲವೂ ಅಹಂಕಾರವನ್ನು ಹೆಚ್ಚಿಸಿ ಇಂತಹ ಕೃತ್ಯಗಳಿಗೆ ಪ್ರೇರೇಪಣೆ ನೀಡುತ್ತದೆ ಎನ್ನುವುದು ಅರ್ಥಮಾಡಿಕೊಳ್ಳಬಹುದಾದ ವಿಚಾರ. ಆದರೆ ಇಂತಹ ಕೃತ್ಯಗಳಿಂದಾಗಿ ಅದೆಷ್ಟೋ ಮೇರು ನಟರು ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡ ಚಿತ್ರರಂಗದ ಮಾನ ಮರ್ಯಾದೆ ಬೀದಿಪಾಲಾಗುತ್ತಿರುವುದು ಸುಳ್ಳಲ್ಲ.
ಹೀಗಾಗಿ ಸುವರ್ಣ ವರ್ಷಗಳನ್ನು ಕಂಡಿರುವ, ಅತ್ತಕಡೆಯಿಂದ ಒಳ್ಳೆಯ ಸಿನಿಮಾ ಬರುತ್ತಿಲ್ಲ, ಜನರು ಥಿಯೇಟರ್‍ಗಳತ್ತ ಬರುತ್ತಿಲ್ಲ ಎಂದು ಚಿತ್ರಮಂದಿರಗಳು ಬಾಗಿಲುಮುಚ್ಚುತ್ತಿರುವ ಸಂದರ್ಭದಲ್ಲಿ ಕನ್ನಡ ಸಿನಿರಂಗದ ಮಾನ ಮರ್ಯಾದೆಯನ್ನು ಉಳಿಸುವ ಜವಾಬ್ದಾರಿ ಕರ್ತವ್ಯ ಪ್ರತೀಯೊಂದು ನಟ ನಟಿಯರಿಗೆ, ತಂತ್ರಜ್ಞರಿಗೆ, ನಿರ್ಮಾಪಕರು, ನಿರ್ದೇಶಕರಿಗೆ ಇದೆ. ಇವುಗಳನ್ನು ನಿಭಾಯಿಸಿಕೊಂಡು ತಾವು ರೀಲ್‍ನಲ್ಲಿ ಮಾಡುವ ಪಾತ್ರಗಳಿಗೆ ರಿಯಲ್ ಲೈಫ್‍ನಲ್ಲಿ ಜೀವ ತುಂಬುವ ಮೂಲಕ ಕಲಾವಿದರು ಆದರ್ಶಪ್ರಾಯರಾಗಿರಲಿ ಎನ್ನುವುದು ಹಾರೈಕೆ.

Social Icons