ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ..! Puttur ಆಸುಪಾಸಿನಲ್ಲಿ ಬೀಡು ಬಿಟ್ಟಿವೆ ಜೋಡಿ ಕಾಡಾನೆಗಳು



ಪುತ್ತೂರು: ಕಳೆದ ಸುಮಾರು 1 ವಾರದಿಂದ ಪುತ್ತೂರು ಆಸುಪಾಸಿನಲ್ಲಿ ಆನೆಯದ್ದೇ ಸುದ್ದಿ. ವಾರದ ಹಿಂದೆ ಕೇರಳದ ಪರಪ್ಪೆ ಅರಣ್ಯ ಭಾಗದಿಂದ ಬಂದು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ರಬ್ಬರ್ ತೋಟಕ್ಕೆ ಕಾಲಿಟ್ಟಿದ್ದ ಕಾಡಾನೆ ಪುತ್ತೂರು ತಾಲೂಕಿನ ಹಲವು ಕಡೆಗಳಿಗೆ ಸಂಚರಿಸಿದೆ. ಈವರೆಗೆ ಕಾಡಿನ ಅಂಚಿನ ಗ್ರಾಮಗಳಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ಈಗ ಜನವಸತಿ ಹೆಚ್ಚಿರುವ, ಬಹುತೇಕ ಪೇಟೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲೇ ಕಾಣಿಸಿಕೊಳ್ಳುತ್ತಿದೆ. ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಆನೆಯನ್ನು ಕಾಡಿಗೆ ಮರಳಿ ಓಡಿಸಲು ಯತ್ನಿಸುತ್ತಿದ್ದರೂ ಫಲಿತಾಂಶ ಶೂನ್ಯವಾಗಿದೆ. 

ಆರಂಭದಲ್ಲಿ ಕೊಳ್ತಿಗೆ ಭಾಗದಲ್ಲಿ ಕಾಣಿಸಿಕೊಂಡಿದ್ದ ಆನೆ ಬಳಿಕ ನಾಪತ್ತೆಯಾಗಿತ್ತು. ಗ್ರಾಮದಲ್ಲಿ ರಾತ್ರಿ ಹೊತ್ತು ಘೀಳಿಡುತ್ತಾ ಜನರಿಗೆ ಭಯ ಹುಟ್ಟಿಸುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಅಲ್ಲಿಂದ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಕಾಡಾನೆಗಳು ಎಲ್ಲಿ ಹೋಯಿತು ಎಂದು ಯಾರಿಗೂ ತಿಳಿದಿರಲಿಲ್ಲ. ಕೆಲ ಸಮಯದ ನಂತರ ಆನೆ ಸವಣೂರು ಗ್ರಾಮದ ಕುಮಾರಮಂಗಲ, ಪುಣ್ಚಪ್ಪಾಡಿ ಪ್ರದೇಶದಲ್ಲಿ ಸಡನ್ನಾಗಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿತ್ತು. ಕೊಳ್ತಿಗೆ ಗ್ರಾಮದಿಂದ ಸವಣೂರು ಗ್ರಾಮಕ್ಕೆ ಹೆಜ್ಜೆ ಹಾಕಿದ ಆನೆ ಒಂದು ರಾತ್ರಿಯನ್ನು ಸವಣೂರು ಗ್ರಾಮದಲ್ಲಿ ಕಳೆದಿತ್ತು. 

ಜೂ.5 ರಂದು ಸವಣೂರು ಗ್ರಾಮದಿಂದ ರಾತ್ರೋ ರಾತ್ರಿ ಆನೆ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕಾಣಿಸಿಕೊಂಡಿತು. ಅಲ್ಲಿಯೂ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿ ಹಗಲು ಹೊತ್ತು ಮಲಗಿದ್ದ ಆನೆಯನ್ನು ಅರಣ್ಯ ಇಲಾಖೆಯವರು ರಾತ್ರೋ ರಾತ್ರಿ ಹರಸಾಹಸಪಟ್ಟು ಬಂದ ದಾರಿಯಲ್ಲೇ ಮತ್ತೆ ಹಿಂದಿರುಗುವಂತೆ ಮಾಡಿದ್ದರು. ಹೀಗೆ ಹೋದ ಒಂಟಿಸಲಗ ಮತ್ತೆ ಸವಣೂರು ಗ್ರಾಮದ ಪುಣ್ಚಪ್ಪಾಡಿಗೆ ತೆರಳಿತ್ತು. ಆಹಾರಕ್ಕಾಗಿ ಅಲ್ಲಿನ ಒಂದಿಬ್ಬರು ಕೃಷಿಯನ್ನು ನಾಶ ಮಾಡಿತ್ತು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಕಾಲಿಟ್ಟ ಗಜರಾಜ ಅಲ್ಲಿಯೂ ಒಂದು ರಾತ್ರಿ ಕಳೆದಿತ್ತು. ಅಲ್ಲಿಂದ ಪ್ರಯಾಣ ಬೆಳೆಸಿದ ಆನೆ ಜೂ.10 ಕ್ಕೆ ಶಾಂತಿಗೋಡು ಗ್ರಾಮಕ್ಕೆ ತಲುಪಿದೆ. ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೆ ಬಂದಿರುವ ಆನೆ ಒಂದು ರಾತ್ರಿ ಅಲ್ಲೇ ಉಳಿದುಕೊಂಡಿತ್ತು. 

ಜೂ.11 ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಒಂದರ ಜೊತೆಗೆ ಇನ್ನೊಂದು ಎನ್ನುವಂತೆ ಎರಡು ಆನೆಗಳು ಕಾಣಿಸಿಕೊಂಡಿದ್ದವು. ಶಾಸಕ ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಎಲ್ಲರೂ ಸ್ಥಳಕ್ಕೆ ತೆರಳಿ ಸ್ಥಳೀಯರಿಗೆ ಧೈರ್ಯ ತುಂಬಿದ್ದರು. ಅರಣ್ಯಕ್ಕೆ ಮರಳಿ ಆನೆಗಳನ್ನು ಕಳಿಸಲಾಗುವುದು ಎಂದು ಭರವಸೆಯನ್ನೂ ನೀಡಿದ್ದರು. 

ದಿನವಿಡೀ ಹರಸಾಹಸಪಟ್ಟ ಅರಣ್ಯ ಸಿಬ್ಬಂದಿ ಆನೆಯನ್ನು ಮರಡಿ ಕಾಡಿಗಟ್ಟಿದೆವು ಎಂದು ಹೇಳಿದ್ದರು. ಆದರೆ ಆನೆಗಳು ತಾವು ಬಂದ ಹಾದಿಯಲ್ಲಿ ಮರಳಿ ಶಾಂತಿಗೋಡಿಗೆ ತಲುಪಿದ್ದವು ಎನ್ನಲಾಗಿದೆ. ಆದರೆ ಸದ್ಯದ ಮಾಹಿತಿಯಂತೆ ಬೆಳ್ಳಿಪ್ಪಾಡಿ ಗ್ರಾಮದಿಂದ ಶಾಂತಿಗೋಡಿಗೆ ಹೋಗಿದೆ ಎನ್ನಲಾದ ಕಾಡಾನೆಗಳೆರಡು ಜೂ.12ರಂದು ಮತ್ತೆ ಬೆಳ್ಳಿಪ್ಪಾಡಿ ಗ್ರಾಮದ ಅರ್ಬಿ, ಕಠಾರದಲ್ಲಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹೀಗೆ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತಲೇ ಇರುವ ಕಾಡಾನೆಗಳು ಜನರಲ್ಲಿ ಭಯ ಸೃಷ್ಟಿಸಿವೆ. ಅರಣ್ಯ ಇಲಾಖೆ ಗಂಭೀರ ಕ್ರಮಗಳನ್ನು ಕೈಗೊಂಡು ಮರಳಿ ಕಾಡಿಗೆ ಅಥವಾ ಆನೆ ಬಿಡಾರಕ್ಕೆ ಶಿಫ್ಟ್ ಮಾಡಬೇಕೆನ್ನುವುದು ಜನರ ಆಗ್ರಹವಾಗಿದೆ.