ಗ್ರಾಮ ಪಂಚಾಯತ್ ಗಳಲ್ಲಿದೆ ಉದ್ಯೋಗಾವಕಾಶ| ಖಾಲಿ ಇರುವ Postಗಳ ನೇಮಕಕ್ಕೆ ಸರ್ಕಾರ ಆದೇಶ|

ಬೆಂಗಳೂರು: ಗ್ರಾಮಮಟ್ಟದಲ್ಲೇ ಕೆಲಸ ಹುಡುಕುತ್ತಿರುವವರಿಗೆ ಸಂತಸದ ಸುದ್ದಿಯಿದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಅಡಿಯಲ್ಲಿನ ಕರ್ನಾಟಕ ಪಂಚಾಯತ್ ರಾಜ್‌ ಆಯುಕ್ತಾಲಯವು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ನಾಲ್ಕು ಪದನಾಮಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಗಳಿಗೆ ಆದೇಶ ನೀಡಿದೆ. ಈ ಮೂಲಕ ಗ್ರಾಮ ಪಂಚಾಯತ್ ಗಳಲ್ಲಿ ಹುದ್ದೆಗಳು ಸೃಷ್ಟಿಯಾಗಲಿವೆ.



ಆಯಾ ಜಿಲ್ಲಾ ಪಂಚಾಯತ್ಗಳು ನೇಮಕಾತಿ ಅಧಿಸೂಚನೆ ಹೊರಡಿಸಿ, ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿ, ಆಯ್ಕೆಪಟ್ಟಿ ಬಿಡುಗಡೆ ಮಾಡಲಿವೆ. ಈ ಕುರಿತು ಆಯಾ ಜಿಲ್ಲೆಯ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಆಯಾ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಪಂಚಾಯತ್ ರಾಜ್‌ ಇಲಾಖೆ ನೇಮಕಾತಿಗೆ ಆದೇಶ ನೀಡಿರುವ ಹುದ್ದೆಗಳು

  • ಕರವಸೂಲಿಗಾರರು / ಬಿಲ್‌ ಕಲೆಕ್ಟರ್‌
  • ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು
  • ವಾಟರ್ ಆಪರೇಟರ್
  • ಸ್ವಚ್ಛತಾಗಾರರು

 ವಿದ್ಯಾರ್ಹತೆ ಏನು?

ಕರವಸೂಲಿಗಾರರು/ ಬಿಲ್‌ ಕಲೆಕ್ಟರ್: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು

ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ದ್ವಿತೀಯ ಪಿಯುಸಿ ಪಾಸ್‌ ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು, ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.

ವಾಟರ್ ಆಪರೇಟರ್: ವಾಟರ್ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 7ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.

ಸ್ವಚ್ಛತಾಗಾರರು: ಈ ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆ ಕಡ್ಡಾಯವಲ್ಲ.

 ಹುದ್ದೆಗಳಿಗೆ ಜಿಲ್ಲಾ ಪಂಚಾಯತ್ ನಿಂದ ಈಗಾಗಲೇ ಅನುಮೋದನೆ ಹೊಂದಿರುವ ಸದರಿ ನೌಕರರ ವಯೋನಿವೃತ್ತಿಯಿಂದ, ಮುಂಡ್ತಿಯಿಂದ ಅಥವಾ ಮರಣಹೊಂದಿರುವ ಕಾರಣಗಳಿಂದಾಗಿ ಖಾಲಿಯಾಗಿದ್ದಲ್ಲಿ, ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಖಾಲಿಯಾದ ಈ ಮೇಲಿನ ನಾಲ್ಕು ವೃಂದದ ಹುದ್ದೆಗಳಲ್ಲಿ ಯಾರು ಕಾರ್ಯನಿರ್ವಹಿಸದೇ ಇದ್ದಲ್ಲಿ, ಸದರಿ ಹುದ್ದೆಗೆ ಒಂದು ಸಿಬ್ಬಂದಿಯನ್ನು ಸರಕಾರೀ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದೆ. ಮುಂದುವರೆದು, ನೇಮಕಾತಿಯ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಲು ಇಲಾಖೆ ಕೋರಿದೆ. 

ಅಲ್ಲದೆ, ಪ್ರತಿ ಗ್ರಾಮ ಪಂಚಾಯತ್ಗಳಿಗೆ ಸಿಬ್ಬಂದಿ ಸಂಖ್ಯೆಯನ್ನು ನಿಗದಿಪಡಿಸುವ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ತರುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಆದ್ದರಿಂದ ಎಲ್ಲ ಜಿಲ್ಲಾ ಪಂಚಾಯತ್ಗಳು ಮುಂದಿನ ಆದೇಶ ಬರುವವರೆಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಸಂಖ್ಯೆಯನ್ನು ನಿಗದಿಪಡಿಸುವ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳದಂತೆಯೂ ಇಲಾಖೆ ಸೂಚನೆ ನೀಡಿದೆ.