ಮಹಿಳಾ Police Sub Inspectorಗೆ ಸಂಕಷ್ಟ ತಂದೊಡ್ಡಿದ ದರ್ಶನ್ ಗೆಳತಿ ಪವಿತ್ರಾ ಗೌಡ ಮೇಕಪ್‌..!!

ಬೆಂಗಳೂರು: ಇದು ಅಚ್ಚರಿಯಾದರೂ ನಿಜ ಸಂಗತಿ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡಳ ಮೇಕ್ಅಪ್ ಪೊಲೀಸ್ ಮಹಿಳಾ ಎಸ್ಐಯೋರ್ವರಿಗೆ ಸಂಕಷ್ಟ ತಂದೊಡ್ಡಿದೆ. ಕೊಲೆ ಪ್ರಕರಣದಲ್ಲಿ  ಪವಿತ್ರಾಗೌಡ ತಮ್ಮ ವಶದಲ್ಲಿದ್ದಾಗ ಆಕೆಗೆ ಸೌಂದರ್ಯವರ್ಧಕಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎಂದು  ಆರೋಪದ ಮೇಲೆ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ನೋಟಿಸ್ ಜಾರಿ ಮಾಡಲಾಗಿದೆ.


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡಳನ್ನು ಬಂಧಿಸಿದ್ದ ಪೊಲೀಸರು
, ತನಿಖೆ ಸಲುವಾಗಿ ಆಕೆಯನ್ನು 10 ದಿನ ಕಸ್ಟಡಿಗೆ ಪಡೆದಿದ್ದರು. ಸಾಂತ್ವನ ಕೇಂದ್ರದಲ್ಲಿ ಆಕೆಯನ್ನು ಇರಿಸಲಾಗಿತ್ತು. ಪವಿತ್ರಾ ಗೌಡ ಮನೆಯ ಮಹಜರು ಮಾಡುವ ವೇಳೆ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಆಕೆಯನ್ನು ಮನೆಗೆ ಕರೆತರಲಾಗಿತ್ತು. ಈ ವೇಳೆ ಆಕೆ ತುಟಿಗಳಿಗೆ ಲಿಪ್‌ಸ್ಟಿಕ್‌ ಹಾಕಿಕೊಂಡು ಮೇಕಪ್ ಮಾಡಿಕೊಂಡಿದ್ದಳು. ಪವಿತ್ರಾ ತುಟಿಗಳಿಗೆ ಲಿಪ್‌ಸ್ಟಿಕ್‌ ಹಾಕಿಕೊಂಡಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದವು. ಭಾರೀ ಚರ್ಚೆಗೂ ಇದು ಗುರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಡಿಸಿಪಿ ಗಿರೀಶ್ ಅವರು, ಕಸ್ಟಡಿಯಲ್ಲಿದ್ದಾಗ ಕೊಲೆ ಪ್ರಕರಣದ ಆರೋಪಿಗೆ ಲಿಪ್‌ಸ್ಟಿಕ್‌ ಸೇರಿ ಸೌಂದರ್ಯವರ್ಧಕ ಬಳಸಲು ಅವಕಾಶ ಕೊಟ್ಟಿದ್ದು ಹೇಗೆ ಎಂಬ ಕುರಿತು ವಿವರಣೆ ನೀಡುವಂತೆ ಪಿಎಸ್‌ಐಗೆ ಮೆಮೋ ಕೊಟ್ಟಿದ್ದಾರೆ. ಈ ಸಂಬಂಧ ಪವಿತ್ರಾಗೌಡಳ ಭದ್ರತಾ ಉಸ್ತುವಾರಿ ಹೊತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಅವರಿಗೆ ವಿವರಣೆ ಕೇಳಿ ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ಮೆಮೋ ಕೊಟ್ಟಿದ್ದಾರೆ.

ಪೊಲೀಸರ ಕಸ್ಟಡಿ ವೇಳೆ ರಾತ್ರಿ ಸಮಯದಲ್ಲಿ ಪವಿತ್ರಾಗೌಡಳನ್ನು ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಅಲ್ಲಿ ಆಕೆಗೆ ಅವರ ಕುಟುಂಬದವರು ಬಟ್ಟೆ ಜತೆ ಲಿಪ್‌ಸ್ಟಿಕ್‌ ಸೇರಿ ಸೌಂದರ್ಯವರ್ಧಕ ತಂದು ಕೊಟ್ಟಿರಬಹುದು. ಬಟ್ಟೆ ಬದಲಾಯಿಸುವ ವೇಳೆ ಆಕೆ ಲಿಪ್‌ಸ್ಟಿಕ್ ಹಾಕಿಕೊಂಡು ಠಾಣೆಗೆ ವಿಚಾರಣೆಗೆ ಬಂದಿರುವ ಸಾಧ್ಯತೆಗಳಿವೆ. ರೆಸ್ಟ್ ರೂಂಗೆ ಹೋಗುವುದಾಗಿ ಹೇಳಿ ಮಲಗುವ ಕೋಣೆಗೆ ಹೋಗಿದ್ದಾಗ ಮುಖ ತೊಳೆದು ಲಿಪ್‌ಸ್ಟಿಕ್ ಹಾಕಿಕೊಂಡಿರಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಈ ವಿಚಾರ ಕೂಡ ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ.