ದೇವಸ್ಥಾನದೊಳಗೆ ಪ್ರವೇಶಿಸಿದರೆ ಸಮಸ್ಯೆ ಏನಾದರೂ ಇದೆಯೇ ಎಂದು ಕೇಳಿ ಈ ಮೂವರು ಮುಸ್ಲಿಂ ಯುವಕರು ಮಾಡಿದ್ದೇನು?




ತಿರುವನಂತಪುರಂ/ ಕೇರಳ: ಅದು ಬಕ್ರೀದ್ ಹಬ್ಬದ ಎರಡು ದಿನ ಮೊದಲು. ಮೊಹಮ್ಮದ್ ನೌಫಲ್, ಮೊಹಮ್ಮದ್ ಬಾಸಿಲ್, ರಸಲ್ ಹಬ್ಬಕ್ಕೆ ಹೊಸ ಉಡುಪು ಖರೀದಿಗೆಂದು ಬೈಕ್‌ನಲ್ಲಿ ನಗರಕ್ಕೆ ಹೊರಟಿದ್ದರು. ದಾರಿ ನಡುವೆ ದೇವಸ್ಥಾನವೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ದೇವಸ್ಥಾನದ ಪೂಜಾರಿ ಸಹಿತ ಕೆಲವರು ಅದನ್ನು ನಂದಿಸುವ ದೃಶ್ಯ ಕಂಡು ಬಂದಿತ್ತು. ಕೂಡಲೇ ಮೂವರು ಯುವಕರು ಬೈಕ್‌ನಿಂದ ಇಳಿದು ದೇವಸ್ಥಾನದ ಬಳಿ ಬಂದರು. ಬೆಂಕಿ ದೇವಸ್ಥಾನದ ಒಳಭಾಗದ ಮೇಲಿನ ಭಾಗದಲ್ಲಿ ಕಾಣಿಸಿಕೊಂಡಿತ್ತು. "ನಮಗೆ ದೇವಸ್ಥಾನದ ಒಳಗೆ ಪ್ರವೇಶಿಸಬಹುದೇ ಎಂದು ಪ್ರಶ್ನಿಸಿದ ಆ ಮೂವರು ಯುವಕರು ಅನುಮತಿ ಸಿಕ್ಕಿದೊಡನೆಯೇ ಒಳ ಪ್ರವೇಶಿಸಿ ಬೆಂಕಿ ನಂದಿಸ ತೊಡಗಿದರು. ಈ ಮೂವರು ಯುವಕರ ಪ್ರಯತ್ನದಿಂದ ಬೆಂಕಿ ಹೆಚ್ಚಿನ ಭಾಗಕ್ಕೆ ಹರಡುವುದು ಇಲ್ಲವಾಯಿತು.

ಅಂದ ಹಾಗೆ ಈ ಘಟನೆ ನಡೆದದ್ದು ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರಿನ ವೇಟಕ್ಕೊರುಮಗನ್ ದೇವಸ್ಥಾನದಲ್ಲಿ.

ಇನ್ನು ಈ ಮೂವರು ಯುವಕರ ಸಮಯೋಚಿತ ಪ್ರವೇಶವನ್ನು ದೇವಸ್ಥಾನದ ಪೂಜಾರಿ ಕೃಷ್ಣ ನಾರಾಯಣನ್ ಶ್ಲಾಘಿಸಿದ್ದಾರೆ.

"ಶುಕ್ರವಾರ ರಾತ್ರಿ ದೇವವಸ್ಥಾನದೊಳಗೆ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.   ಅಲ್ಲಿದ್ದವರ ಪೈಕಿ ಯಾರೂ ಮೇಲೆ ಹತ್ತುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಈ ಮೂವರು ಮುಸ್ಲಿಂ ಯುವಕರು ಬಂದರು. ನಮಗೆ ದೇವಸ್ಥಾನದೊಳಗೆ ಪ್ರವೇಶಿಸಬಹುದೇ ಎಂದು ಕೇಳಿದರು. ಅಭ್ಯಂತರವಿಲ್ಲ ಎಂದ ಕೂಡಲೇ ಕಾರ್ಯಪ್ರವೃತ್ತರಾದ ಯುವಕರು ಮೇಲೆ ಹತ್ತಿ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ" ಎಂದು ದೇವಸ್ಥಾನದ ಪೂಜಾರಿ ಕೃಷ್ಣ ನಾರಾಯಣನ್ ಹೇಳಿದ್ದಾರೆ.


"ನಾವು ಬಕ್ರೀದ್ ಹಬ್ಬಕ್ಕೆ ಉಡುಪು ಖರೀದಿಗೆಂದು ನಗರಕ್ಕೆ ಹೊರಟಿದ್ದೆವು. ಈ ವೇಳೆ ದೇವಸ್ಥಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವರು ಅದನ್ನು ನಂದಿಸುತ್ತಿರುವುದು ಕಂಡು ಬಂತು. ಕೂಡಲೇ ಬೈಕ್ ನಿಲ್ಲಿಸಿ ದೇವಸ್ಥಾನದ ಬಳಿ ತೆರಳಿದೆವು. ಅವರ ಅನುಮತಿ ಕೇಳಿ ಒಳ ಪ್ರವೇಶಿಸಿ ಬೆಂಕಿ ನಂದಿಸಿದೆವು" ಮೊಹಮ್ಮದ್ ನೌಫಲ್ ಹೇಳಿದ್ದಾರೆ.


"ದೇವಸ್ಥಾನವಾದುದರಿಂದ ಒಳಗೆ ಪ್ರವೇಶಿಸಲು ಅಂಜಿಕೆ ಇತ್ತು. ನಮಗೆ ಪ್ರವೇಶಿಸಬಹುದೇ ಎಂದು ಗೊತ್ತಿರಲಿಲ್ಲ. ಅನುಮತಿ ಸಿಕ್ಕ ಬೆನ್ನಲ್ಲೇ ಬೆಂಕಿ ನಂದಿಸಲು ಮುಂದಾದೆವು" ಎಂದು ಮೊಹಮ್ಮದ್ ಬಾಸಿಲ್ ಹೇಳಿದ್ದಾರೆ.