ರೇಣುಕಾಸ್ವಾಮಿ Murder Case| ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಿತ 10 ಮಂದಿ ಬಂಧನ| Challenging Star Darshan Arrest

ಬೆಂಗಳೂರು: ಬೆಳ್ಳಂಬೆಳಗ್ಗೆ ಕರ್ನಾಟಕದ ಚಂದನವನ ಬೆಚ್ಚಿಬೀಳುವಂತಹ ವಿದ್ಯಾಮಾನ ನಡೆದಿದೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಹೋದ ಪೊಲೀಸರು ಅಲ್ಲಿ ಬ್ಲೂ ರ್ಯಾಡಿಸನ್ ಹೊಟೇಲ್‍ನಲ್ಲಿ ಬೆಳಗಿನ ಜಾವ ಜಿಮ್ ಮಾಡುತ್ತಿದ್ದ ನಟ ದರ್ಶನ್ ಅವರನ್ನು ಅಲ್ಲಿಂದಲೇ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಅವರ ಜೊತೆ ಅವರ 9 ಮಂದಿ ಸಹಚರರನ್ನು ವಶಕ್ಕೆ ಪಡೆದು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತೀವ್ರ ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಅವರ ಜೊತೆ ಪಟ್ಟಣಗೆರೆ ಜಯಣ್ಣ ತಂಗಿ ಪುತ್ರ ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿ 10 ಜನರನ್ನು ಅರೆಸ್ಟ್ ಮಾಡಲಾಗಿದೆ. ಹತ್ಯೆ ಮಾಡಿರುವ ಆರೋಪಿಗಳು ನೀಡಿರುವ ಹೇಳಿಕೆ ಮೇಲೆ ನಟ ದರ್ಶನ್ ಬಂಧನವಾಗಿದೆ. ಘಟನೆಗೆ ಸಂಬಂಧಿಸಿ ನಟಿ ಪವಿತ್ರಾ ಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.



ಏನಿದು ಘಟನೆ?

ಜೂನ್ 9 ರಂದು ಭಾನುವಾರ ಕಾಮಾಕ್ಷಿಪಾಳ್ಯದಲ್ಲಿ ಅಪರಿಚಿತ ಶವವೊಂದು ಸಿಕ್ಕಿತ್ತು. ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್ ಮೆಂಟ್ ಬಳಿಯ ಮೋರಿಯಲ್ಲಿ ಶವ ತೇಲಾಡುತ್ತಿತ್ತು. ನಾಯಿಗಳು ಕಚ್ಚಿ ಎಳೆದು ತಂದಾಗ 30ರಿಂದ 35 ವರ್ಷದ ಯುವಕನ ಶವ ಎಂದು ಗೊತ್ತಾಗಿತ್ತು.ಮೃತದೇಹದ ಮೇಲೆ ಇದ್ದ ಗಾಯಗಳನ್ನು ಗಮನಿಸಿ ಕಾಮಾಕ್ಷಿಪಾಳ್ಯದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಸಿಸಿಟಿವಿ ಹಾಗೂ ಇತರೆ ತಾಂತ್ರಿಕ ಆಧಾರದ ಮೇಲೆ ವ್ಯಕ್ತಿಯ ಗುರುತು ಪರಿಚಯ ಗೊತ್ತಾಗಿದ್ದು, ಆತ ಚಿತ್ರದುರ್ಗದ ವಾಸಿ ರೇಣುಕಾ ಸ್ವಾಮಿ ಎಂದು ತಿಳಿದುಬಂದಿತ್ತು. ತಮ್ಮ ಮಗ ಕಳೆದ ಶನಿವಾರದಿಂದ ಕಾಣಿಸುತ್ತಿಲ್ಲ, ನಾಪತ್ತೆಯಾಗಿದ್ದಾನೆ ಎಂದು ತಾಯಿ ಪೊಲೀಸರು ಠಾಣೆಗೆ ದೂರು ನೀಡಿದಾಗ ಪ್ರಕರಣದ ಜಾಡು ಹಿಡಿದು ತನಿಖೆ ಮಾಡುತ್ತಾ ಹೋದಾಗ ಬೆಳಕಿಗೆ ಬಂದಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ. 

ಪ್ರಕರಣದ ಹಿನ್ನೆಲೆ

ನಟ ದರ್ಶನ್ ಪವಿತ್ರಾ ಗೌಡ ಎಂಬಾಕೆ ಜೊತೆ ಆಪ್ತವಾಗಿದ್ದು, ಈ ಬಗ್ಗೆ ಪವಿತ್ರಾ ಗೌಡ ಕೆಲ ಸಮಯ ಹಿಂದೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖಾರವಾಗಿ ಆಕ್ಷೇಪ ವ್ಯಕ್ತಪಡಿಸಿ ನಂತರ ಸೋಷಿಯಲ್ ಮೀಡಿಯಾ ಮೂಲಕ ಇಬ್ಬರೂ ಕಿತ್ತಾಡಿಕೊಂಡಿದ್ದರು. ಈ ಘಟನೆ ನಂತರ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲ ಮೇಸೆಜ್ ಮಾಡಿದ್ದನು ಎಂದು ಹೇಳಲಾಗಿದೆ. ಇದರಿಂದ ಕೆರಳಿದ ದರ್ಶನ್ ಮತ್ತು ಅವರ ಸ್ನೇಹಿತರು ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದರು. ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ವಿನಯ್ ಎನ್ನುವವರಿಗೆ ಸೇರಿದ ಶೆಡ್‍ನಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. 4 ಜನ ಹಲ್ಲೆ ಮಾಡಿದ ತಂಡದಲ್ಲಿ ದರ್ಶನ್ ಇದ್ದ ಬಗ್ಗೆ ಮಾಹಿತಿ ಇದೆ.



ಹತ್ಯೆ ಮಾಡಿ ಮೃತದೇಹವನ್ನು ಮೋರಿಯಲ್ಲಿ ಎಸೆದು ಹೋಗಲಾಗಿತ್ತು. ಘಟನೆ ಸಂಬಂಧ ರೇಣುಕಾಸ್ವಾಮಿ ಪೊಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಜಯನಗರ ಎಸಿಪಿ ಚಂದನ್ ತಂಡದಿಂದ ದರ್ಶನ್ ವಶಕ್ಕೆ ಪಡೆಯಲಾಗಿದೆ. ಇಂದು ಬೆಳಗ್ಗೆ ಮೈಸೂರಿನ ಫಾರ್ಮ್ ಹೌಸ್‍ನಲ್ಲಿ ನಟ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಕೊಲೆ ನಡೆದು ಮೋರಿಗೆ ಎಸೆದ ಕಾಮಾಕ್ಷಿಪಾಳ್ಯದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ದರ್ಶನ್ ಮತ್ತು ಅವರ ಆಪ್ತರನ್ನು ಪೊಲೀಸರು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.