ಮಂಗಳೂರಿನಲ್ಲಿ 'ರಾಸ್ತಾ ರೋಕ್' ನಡೆಸಿದ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರು ವಶಕ್ಕೆ

 



ಮಂಗಳೂರು: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಪಿವಿಎಸ್ ವೃತ್ತದ ಬಳಿ "ರಾಸ್ತಾ ರೋಕ್" ನಡೆದ ಸಂದರ್ಭ ಪೊಲೀಸರು ಎಂಪಿ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.


ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಪಿವಿಎಸ್ ವೃತ್ತದ ಬಳಿ ಎಂಪಿ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರಿನ ಬಿಜೆಪಿ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು.


ಬಳಿಕ ಪ್ರತಿಭಟನಾಕಾರರು ರಾಸ್ತಾ ರೋಕ್ ನಡೆಸಲು ಪಿವಿಎಸ್ ವೃತ್ತದ ಬಳಿ ಆಗಮಿಸಿದರು. ಮಾನವ ಸರಪಣಿ ಮಾಡಿದ ಪ್ರತಿಭಟನಾಕಾರರು ರಸ್ತೆಯ ಮೂರು ದಾರಿಗಳಿಂದ ಬರುವ ವಾಹನಗಳನ್ನು ತಡೆದರು. ಈ ವೇಳೆ ಕಾರೊಂದು ಮುಂದೆ ಚಲಾಯಿಸಲು ಯತ್ನಿಸಿದಾಗ ಪ್ರತಿಭಟನಾಕಾರರು ತಡೆದು ಘೋಷಣೆ ಕೂಗಿ ಕಾರನ್ನು ಹಿಂದೆ ಸರಿಯುವಂತೆ ಮಾಡಿದರು. ಬಳಿಕ ಪೊಲೀಸರು ರಸ್ತೆ ತಡೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದರೂ ಪ್ರತಿಭಟನಾಕಾರರಿಂದ ರಾಜ್ಯ ಸರಕಾರದ ವಿರುದ್ಧ ಘೋಷಣೆ ಮತ್ತಷ್ಟು ತಾರಕಕ್ಕೇರಿತು. ಆಗ ಯುವಮೋರ್ಚದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.




ಸ್ಥಳದಲ್ಲಿದ್ದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರು ಎಂಎಲ್ಎ ವೇದವ್ಯಾಸ ಕಾಮತ್ ಅವರನ್ನು ರಸ್ತೆತಡೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಆದರೆ ಅವರು ರಸ್ತೆತಡೆ ಸ್ಥಗಿತಗೊಳಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡದ ಕಾರಣ, ಪೊಲೀಸರು ವೇದವ್ಯಾಸ ಕಾಮತ್ ಸಹಿತ ಎಂಪಿ ಬ್ರಿಜೇಶ್ ಚೌಟರನ್ನು ವಶಕ್ಕೆ ತೆಗೆದುಕೊಳ್ಳಲು ತಳ್ಳಿಕೊಂಡೇ ಬಸ್‌ನತ್ತ ಬಂದರು. ಆಗ ಆಕ್ರೋಶಿತ ಕಾರ್ಯಕರ್ತರು ಅವರನ್ನು ವಶಕ್ಕೆ ತೆಗೆದುಕೊಳ್ಳದಂತೆ ತಡೆಯಲೆತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆಯಿತು. ಮಹಿಳಾ ಕಾರ್ಯಕರ್ತರು ಬಸ್ ಮುಂದೆ ಹೋಗದಂತೆ ತಡೆದರೂ ಮಹಿಳಾ ಪೊಲೀಸ್ ಅವರನ್ನು ತಡೆದು ಬಸ್ ಮುಂದಕ್ಕೆ ಸಂಚರಿಸುವಂತೆ ಮಾಡಿದರು. ಸುಮಾರು 15ನಿಮಿಷಗಳ ಕಾಲ ನಡೆದ ರಾಸ್ತಾರೋಕ್ ಎಂಪಿ, ಎಂಎಲ್ಎ ಸೇರಿದಂತೆ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿಗೆ ಅಂತ್ಯಗೊಂಡಿತು.