ಮಂಗಳೂರು: ನಗರದ ಹೊರವಲಯದ ಬೋಳಿಯಾರ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮಸೀದಿ ಮುಂಭಾಗ ಪ್ರಚೋದನಾಕಾರಿ ಘೋಷಣೆ ಕೂಗಿದ್ದಕ್ಕೆ ಕೇಸ್ ದಾಖಲಿಸಲಾಗಿದೆಯೇ ಹೊರತು ಭಾರತ್ ಮಾತ ಕೀ ಜೈ ಕೂಗಿದ್ದಕ್ಕೆ ಕೇಸ್ ಹಾಕಿಲ್ಲ. ಮುಸ್ಲಿಮರನ್ನು ಪ್ರಚೋದನೆ ಮಾಡಿರುವ ಬಗ್ಗೆ ನಮ್ಮಲ್ಲಿ ಪೂರಕ ದಾಖಲೆಗಳಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಮಾಡಿದ ದಿನ ನಡೆದ ವಿಜಯೋತ್ಸವದ ಮೆರವಣಿಗೆ ಬಳಿಕ ಮೂರು ಮಂದಿ ಮಸೀದಿ ಮುಂದೆ ಘೋಷಣೆ ಕೂಗಿದ್ದಾರೆ. ಭಾರತ್ ಮಾತ ಕೀ ಜೈ ಎನ್ನುವ ಘೋಷಣೆಗೂ ಮೊದಲು ಬೇರೆ ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಇದರಿಂದ ಉದ್ರಿಕ್ತರಾದ ಮಸೀದಿಯಲ್ಲಿರುವ ಒಂದಷ್ಟು ಮಂದಿ ಅವರಿಗೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ. ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದೇವೆ. ಉಳಿದವರನ್ನು ಆದಷ್ಟು ಬೇಗ ಅರೆಸ್ಟ್ ಮಾಡಲಾಗುವುದು ಎಂದರು.
ಆರೋಪಿಯಲ್ಲಿ ಓರ್ವ ರೌಡಿ ಶೀಟರ್ ಇದ್ದಾನೆ. ಆತ ಚೂರಿಯನ್ನು ಇಟ್ಟುಕೊಂಡಿದ್ದ. ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ ಶಾಂತಿ ಸಭೆ ನಡೆಸುತ್ತೇವೆ. ಎಲ್ಲ ಧರ್ಮದ ಪ್ರಮುಖರನ್ನು ಕರೆದು ಶಾಂತಿ ಸಭೆ ನಡೆಸುತ್ತೇವೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು.

Social Icons