ವರದಿ: ಪ್ರಕಾಶ್ ಕೋಡಿಂಬಾಳ
ಕಡಬ: ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಲು ಮಾಡಿರುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಶೆಡ್ ನಲ್ಲಿ ಜಾಗವಿದ್ದರೂ ಮಳೆಗೆ ಹೊರಗೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಗೆ ಸಂಬಂಧ ಪಡದ ವ್ಯಕ್ತಿಯ ಕಾರು ಇರುವ ಶೆಡ್ ಜಾಗವನ್ನು ಅತಿಕ್ರಮಿಸಿದೆ.
ಹಳೆಯ 108 ಆ್ಯಂಬುಲೆನ್ಸ್ ಸುಸ್ಥಿತಿಯಲ್ಲಿದ ಕಾರಣ ಅದನ್ನು ಸೇವೆಯಿಂದ ಹೊರಗಿಡಲಾಗಿದೆ. ಇದೀಗ ಒಂದುವರೆ ತಿಂಗಳ ಹಿಂದೆ ಹೊಸ ಆ್ಯಂಬುಲೆನ್ಸ್ ಬಂದಿ ದ್ದುಈ ವಾಹನ ಆಸ್ಪತ್ರೆಯ ಪಕ್ಕ ಗಾಳಿ, ಮಳೆ, ಬಿಸಿಲಿಗೆ ಮೈಯೋಡ್ಡಿ ಹೊರಗೆ ನಿಲ್ಲುತ್ತಿದೆ. ಈ ಮೂಲಕ ಜನರ ತೆರಿಗೆ ಹಣದಿಂದ ಹೊಸದಾಗಿ ಬಂದಿರುವ ಈ ವಾಹನಕ್ಕೆ ಕಂಟಕ ಎದುರಾಗಿದೆ. ಮಳೆಗೆ ವಾಹನ ಒದ್ದೆಯಾಗುವುದರಿಂದ ಪ್ರಮುಖ ಲೈಟ್ ಸೇರಿದಂತೆ ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.
ನಿಂತಲ್ಲೇ ಇರುವ ಆಸ್ಪತ್ರೆಯ ಮಿನಿ ಆ್ಯಂಬುಲೆನ್ಸ್:
ಆಸ್ಪತ್ರೆಯ ಪಕ್ಕವೇ ಹೊಸದಾಗಿ ಶೆಡ್ ನಿರ್ಮಾಣವಾಗುತ್ತಿದ್ದು ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ.ಆದರೆ ಅಲ್ಲಿ ಸಮುದಾಯ ಆಸ್ಪತ್ರೆಯ ಅಧೀನದ ಸಣ್ಣ ಆ್ಯಂಬುಲೆನ್ಸ್ ಠಿಕಾಣಿ ಹೂಡಿದೆ .ಈ ವಾಹನವನ್ನು ಅಮಾವಾಸೆ –ಹುಣ್ಣಿಗೊಮ್ಮೆ ಮಾತ್ರ ಹೊರ ತೆಗೆಯಲಾಗುತ್ತದೆ ಹೊರತು ತುರ್ತು ಸೇವೆಗೆ ಬಳಕೆಯಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಖಾಸಗಿ ಕಾರು ಯಾರದ್ದು?:
ಸಮುದಾಯ ಆಸ್ಪತ್ರೆಯ ವಠಾರದಲ್ಲಿರುವ ಶೆಡ್ ನಲ್ಲಿ ಸರ್ಕಾರಿ ವಾಹನ ನಿಲ್ಲುವ ಬದಲು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡು ಬಳಕೆ ಮಾಡುತ್ತಿರುವ ಆರೋಪ ವ್ಯಕ್ತವಾಗಿದ್ದು ಇದಕ್ಕೆ ಪೂರಕ ಚಿತ್ರವೂ ಮಾಧ್ಯಮಗಳಿಗೆ ಲಭ್ಯವಾಗಿದೆ. ಕೆ.ಎಲ್ ನೋಂದಣಿಯ ಕಾರಿನ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕಾಗಿದೆ.
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ನೆರೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಏನೆಕಲ್, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರು ಕೂಡ ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿ ವಿಸ್ತರಿಸಿದೆ. ಈ ಎಲ್ಲಾ ಪ್ರದೇಶಗಳಿಗೆ ಕವಚ 108 ಆ್ಯಂಬುಲೆನ್ಸ್ ಸೇವೆ ನೀಡುತ್ತಿದ್ದು ಶೆಟ್ ನಲ್ಲಿ ನಿಲ್ಲಿಸುವ ಮೂಲಕ ಈ ವಾಹನದ ತಾಂತ್ರಿಕ ಆರೋಗ್ಯವನ್ನು ಕಾಪಾಡಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು,ಅಧಿಕಾರಿಗಳು,ಸಾಮಾಜಿಕ ಹೋರಾಟಗಾರರು ಈ ಬಗ್ಗೆ ಗಮನ ಹರಿಸಬೇಕಿದೆ.


Social Icons