ಸಂಪಾದಕೀಯI ಗ್ಯಾರಂಟಿ ರದ್ದುಪಡಿಸುವುದು ಜನರಿಗೆ ಮಾಡುವ ದ್ರೋಹ i Editorial

 


ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಗಳು ನಿಲ್ಲಿಸುವುದು ಅಥವಾ ಮುಂದುವರಿಸುವುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈ ಚರ್ಚೆ ಮಾಡುವುದೆ ಒಂದು ಜನದ್ರೋಹವಾಗಿದೆ.

ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತಗೊಂಡ ಲಕ್ಷ್ಮಣ್ ಅವರು ಜನರು ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ಗೆ ಮತ ಚಲಾಯಿಸದ ಪರಿಣಾಮ ಅದನ್ನು ನಿಲ್ಲಿಸುವುದು ಒಳ್ಳೆಯದು ಎಂಬ ಬಲವಾದ ಆಗ್ರಹವನ್ನು ಮಾಡಿದ್ದಾರೆ. ಈ ನಿಲುವು ಹಲವು ಕಾಂಗ್ರೆಸ್ ನವರಲ್ಲಿ ಇದೆ.  ಆದರೆ ಎದುರು ಹೇಳಿಕೊಳ್ಳಲು ಮಾತ್ರ ಹೋಗುತ್ತಿಲ್ಲ. ಆದರೆ ಗೃಹ ಸಚಿವ ಪರಮೇಶ್ವರ್ , ನೂತನ ವಿಧಾನಪರಿಷತ್ ಸದಸ್ಯ ಐವನ್ ಡಿ ಸೋಜ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಚುನಾವಣೆಯ ಬಳಿಕ ಈ ಚರ್ಚೆಗಳು ಶುರುವಾಗಿದ್ದು ಮಾತ್ರ ಕಾಂಗ್ರೆಸ್ ಸರಕಾರದ ಯೋಜನೆಗೆ ಜನ ಮತ ಚಲಾಯಿಸಲ್ಲ ಎಂಬ ಭಾವನೆಯಿಂದ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರಕಾರದ  ಭ್ರಷ್ಟಾಚಾರ ಆರೋಪಿಸಿ ಹೋರಾಟ ಮಾಡಿದ್ದ ಕಾಂಗ್ರೆಸ್ ಅದರಿಂದಲೇ ಸರಕಾರ ಉರುಳಿಸಲು ಸಾಧ್ಯವಾಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಪಂಚ ಗ್ಯಾರಂಟಿಯನ್ನು ಘೋಷಿಸಿತ್ತು. ಈ ಪಂಚ ಗ್ಯಾರಂಟಿಗಳು ಜನರನ್ನು ಸೆಳೆದು ಅದು ಕಾಂಗ್ರೆಸ್ ಗೆ ಮತವಾಗಿ ಸಿಕ್ಕಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯವನ್ನು ಗಳಿಸಿತು. ಇಂದು ಕಾಂಗ್ರೆಸ್ ಸರಕಾರ ಐದು ವರ್ಷ ಆಡಳಿತ ಮಾಡಲು ಜನರು ಮತ ಕೊಡಲು ಕಾರಣವಾದ್ದದ್ದು ಪಂಚ ಗ್ಯಾರಂಟಿಗಳು. ಇದನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ನಿಲ್ಲಿಸಲು ಹೋಗುವುದು ಮೂರ್ಖತನ.

ಪಂಚ ಗ್ಯಾರಂಟಿಗಳು ಜನರ ಬದುಕಿಗೆ ಹೊಸ ಭರವಸೆಯನ್ನು ಮೂಡಿಸಿದೆ. ಇದರಿಂದ ಮಹಿಳೆಯರು ಸಾಕಷ್ಟು ಪ್ರಯೋಜನಗಳನ್ನು ಪಡೆದಿದ್ದಾರೆ. ಬಡ ಕುಟುಂಬಗಳು ಸಾಕಷ್ಟು ಅನುಕೂಲಗಳನ್ನು ಪಡೆದುಕೊಂಡಿದೆ. ಹಿಂದಿನ ಜೀವನ ಪದ್ದತಿ ಸುಧಾರಣೆಗೆ ಕಾರಣವಾಗಿದೆ. ಆದರೆ ಪ್ರಯೋಜನ ಪಡೆದ ಜನರಿಂದ ಪೂರ್ತಿ ಕೃತಜ್ಞತೆಯನ್ನು ನಿರೀಕ್ಷಿಸುವುದು ತಪ್ಪು.

ಗ್ಯಾರಂಟಿ ಯೋಜನೆಯ ಭರವಸೆಯಿಂದ ಕಾಂಗ್ರೆಸ್ ಗೆ ಮತ ಚಲಾಯಿಸಿದ ಮತದಾರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಷ್ಟರಮಟ್ಟಿಗೆ ಬೆಂಬಲಿಸಿಲ್ಲ ಎಂಬುದೇನು ನಿಜ. ಆದರೆ ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಡೆದ 1 ಸೀಟನ್ನು ಈ ಬಾರಿ 9 ಕ್ಕೆ ಹೆಚ್ಚಿಸಲು ಗ್ಯಾರಂಟಿಯ ಕೊಡುಗೆ ಇದೆ. ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸೀಟು ಪಡೆಯಲು ಸಾಧ್ಯವಾಗಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಗ್ಯಾರಂಟಿ ನಿಲ್ಲಿಸಲು ಹೋಗುವುದು ಜನದ್ರೋಹವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಸರಕಾರ ನಿಲ್ಲಿಸಿದರೆ ಅದು ಬಿಜೆಪಿಯ ವ್ಯೂಹಕ್ಕೆ ಸಿಕ್ಕಿಬಿದ್ದಂತೆ. ರಾಜ್ಯದಲ್ಲಿ ಗ್ಯಾರಂಟಿಯ ಪ್ರಭಾವವನ್ನು ಅರಿತಿರುವ ಬಿಜೆಪಿಯು ಕಾಂಗ್ರೆಸ್ ಸರಕಾರ ಗ್ಯಾರಂಟಿಯನ್ನು ನಿಲ್ಲಿಸಲಿ ಎಂದು ಮನದಲ್ಲಿ ಅಂದುಕೊಳ್ಳುತ್ತಿದೆ. ಗ್ಯಾರಂಟಿ ನಿಲ್ಲಿಸಿದರೆ ಮುಂದಿನ ಚುನಾವಣೆಯಲ್ಲಿ ರಾಜ್ಯ ಸರಕಾರದ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ ಹೊಂದಿದೆ. ಈ ವ್ಯೂಹಕ್ಕೆ ಕಾಂಗ್ರೆಸ್ ಬಲಿಯಾಗಿ ಗ್ಯಾರಂಟಿ ನಿಲ್ಲಿಸಲು ಹೋದರೆ ಅದು ಕಾಂಗ್ರೆಸ್ ಗೆ ದೊಡ್ಡ ಪೆಟ್ಟು ನೀಡಲಿದೆ. ಈ ಹಿನ್ನೆಲೆಯನ್ನು, ಜನರ ಹಿತವನ್ನು ಅರ್ಥ ಮಾಡಿಕೊಂಡು ಗ್ಯಾರಂಟಿ ಯೋಜನೆ ನಿಲ್ಲಿಸಲು ಮುಂದಾಗದೆ ಇರುವುದು ಕಾಂಗ್ರೆಸ್ ಗೆ ಈಗ ಇರುವ ದಾರಿಯಾಗಿದೆ.