ಹಾಲಿನ ಬೆಲೆ ಏರಿಕೆ ಎಫೆಕ್ಟ್| Hotelಗಳಲ್ಲಿ ಟೀ, ಕಾಫಿ, ತಿಂಡಿ ದರ ಹೆಚ್ಚಳ ಮಾಡುವಂತಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಹೊಟೆಲ್ ಗಳಲ್ಲಿ ತಿಂಡಿ, ತಿನಿಸು, ಟೀ ಕಾಫಿಗಳ ದರ ಹೆಚ್ಚಾಗಬಹುದು ಎನ್ನುವ ಜನತೆಗೆ ಸಿಎಂ ಸಿದ್ದರಾಮಯ್ಯ ಸಮಾಧಾನಕರ ಮಾಹಿತಿ ನೀಡಿದ್ದಾರೆ. ಹೋಟೆಲ್‌ಗಳಲ್ಲಿ ಕಾಫಿ ಟೀ ದರ ಹೆಚ್ಚಳ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.



ನಂದಿನಿ ಹಾಲಿನ ದರ ಹೆಚ್ಚಳ ಮಾಡಿಲ್ಲ. ಉತ್ಪಾದನೆಯಾಗುತ್ತಿರುವ ಹೆಚ್ಚುವರಿ ಹಾಲಿನ ಮಾರಾಟಕ್ಕಾಗಿ ಗ್ರಾಹಕರಿಗೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ನೀಡಿ ಅದಕ್ಕೆ ತಕ್ಕ ದರವನ್ನಷ್ಟೇ ನಿಗದಿ ಮಾಡಲಾಗಿದೆ. ಹಾಗಾಗಿ ಹೋಟೆಲ್‌ಗಳಲ್ಲಿ ಕಾಫಿ ಟೀ ದರ ಹೆಚ್ಚಳ ಸಲ್ಲದು ಎಂದು ಸಿಎಂ ಹೇಳಿದ್ದಾರೆ.

ಕೆಎಂಎಫ್ ಹಾಲಿನ ದರ ಏರಿಕೆ ಮಾಡಿಲ್ಲ, ರಾಜ್ಯದಲ್ಲಿ 90 ಲಕ್ಷ ಲೀಟರ್ ಇದ್ದ ಹಾಲಿನ ಉತ್ಪಾದನೆ 99 ಲಕ್ಷ ಲೀಟರ್‌ಗೆ ಹೆಚ್ಚಿದೆ. ಅದನ್ನು ಖರೀದಿಸಿ ಮಾರಾಟ ಮಾಡಬೇಕು ತಾನೆ ಖರೀದಿಸುವುದಿಲ್ಲ ಎಂದರೆ ರೈತರಿಗೆ ನಷ್ಟವಾಗುತ್ತದೆ. ಹಾಗಾಗಿ ಅರ್ಧ ಲೀಟರ್ ಮತ್ತು ಲೀಟರ್ ಹಾಲಿನ ಪ್ಯಾಕೆಟ್‌ ನಲ್ಲಿ 50 ಮಿ.ಲೀ ಹೆಚ್ಚಳ ಮಾಡಿ ಅದಕ್ಕೆ ತಕ್ಕನಾಗಿ ದರ ನಿಗದಿಪಡಿಸಲಾಗಿದೆ. 2.10 ರು. ದರ ಹೆಚ್ಚಿಸಬೇಕಿತ್ತು. ಆದರೂ 2 ರು.ಹೆಚ್ಚಿಸಲಾಗಿದೆ ಅಷ್ಟೆ. ಹೀಗಿರುವಾಗ ಹೋಟೆಲ್‌ನವರು ಕಾಫಿ, ಟೀ ದರ ಹೆಚ್ಚಿಸಲು ಬರುವುದಿಲ್ಲ. ಹಾಲಿನ ದರ ಹೆಚ್ಚಿಸಿದ್ದರೆ ಅವರು ದರ ಏರಿಕೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ  ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸರ್ಕಾರ ಹಾಲಿನ ದರ ಹೆಚ್ಚಿಸಿಲ್ಲ. ರೈತರ ಹಿತದೃಷ್ಟಿ ಯಿಂದ ಹೆಚ್ಚುವರಿಯಾಗಿ ಉತ್ಪಾ ದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅದಕ್ಕೆ ತಕ್ಕನಾಗಿ ದರ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಹಾಲಿನ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ರೈತರ ಹಿತದೃಷ್ಟಿ ಯಿಂದ ಆ ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ನೀಡಲು ಅರ್ಧ ಮತ್ತು ಒಂದು ಲೀಟ‌ರ್ ಹಾಲಿನ ಪ್ಯಾಕ್‌ನಲ್ಲಿ 50 ಮಿ.ಲೀ. ಹೆಚ್ಚುವರಿ ಸೇರಿಸಿ ಮಾರಾಟಮಾಡಲಾಗುತ್ತಿದೆ. ಅದಕ್ಕನುಗುಣವಾಗಿ ದರ ನಿಗದಿಪಡಿಸಲಾಗಿದೆ. ಇದನ್ನು ಬಿಜೆಪಿಯವರು ದರ ಹೆಚ್ಚಳ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.