ಕಾಲೇಜಿನಲ್ಲಿ Gender Friendly Toilet: ಈ ಶೌಚಾಲಯಕ್ಕೆ ಹುಡುಗರಿಗೂ- ಹುಡುಗಿಯರಿಗೂ ಪ್ರವೇಶಿಸಬಹುದು

 


ಎರ್ನಾಕುಲಂ/ ಕೇರಳ:  ಹಲವು ವಿಚಾರಗಳಿಗೆ ಪ್ರಸಿದ್ದಿ ಪಡೆದಿರುವ ಜಿಲ್ಲೆಯ ಮಹಾರಾಜ ಸರಕಾರಿ ಕಾಲೇಜು ಇದೀಗ ಲಿಂಗ ಸ್ನೇಹಿ ಶೌಚಾಲಯ ಸ್ಥಾಪಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.

ಅಂಕಣಕಾರರು, ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ರಾಮ್‌ಮೋಹನ್ ಪಾಲಿಯತ್ ಇತ್ತೀಚಿಗೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಶೌಚಾಲಯವನ್ನು ಉಪಯೋಗಿಸಿದ್ದು, ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಂಕಣಕಾರರು ಈ ಪ್ರಯೋಗವನ್ನು ಮೆಚ್ಚಿದ್ದು, 57 ವರ್ಷದ ಜೀವನದಲ್ಲಿ ಮೊದಲ ಬಾರಿ ಇಂತಹ ಶೌಚಾಲಯ ಬಳಸುತ್ತಿದ್ದೇನೆ ಎಂದಿದ್ದಾರೆ.


ಇದಕ್ಕೆ ಪರ ವಿರೋಧ‌ ಕಮೆಂಟ್‌ಗಳೂ ಬಂದಿದ್ದು, ಹೆಚ್ಚಿನ ಜನರು ಇದನ್ನು ಬೆಂಬಲಿಸಿದ್ದಾರೆ. ಆದರೆ ಕೆಲವರು ಈ ಪ್ರಯೋಗವನ್ನು ಟ್ರೋಲ್ ಮಾಡಿದ್ದಾರೆ.


ಮಹಾರಾಜ ಕಾಲೇಜಿನಲ್ಲಿ 2018ರಿಂದಲೇ ಈ ರೀತಿಯ ಶೌಚಾಲಯಗಳಿದ್ದು, ಇದೀಗ ಹೆಚ್ಚುವರಿಯಾಗಿ 30 ಶೌಚಾಲಯ ಗಳನ್ನು ಮಾಡಲಾಗಿದೆ ಎಂದು ಶಾಲೆಯ ಮೂಲಗಳು ತಿಳಿಸಿವೆ.


ಈ ನೂತನ ಶೌಚಾಲಯದಲ್ಲಿ ಅಸ್ವಾಭಾವಿಕವಾದುದು ಏನೂ ಇಲ್ಲ. ನಾವು ನಮ್ಮ ಮನೆಗಳಲ್ಲಿ ಪುರುಷರಿಗೆ ಮತ್ತು‌ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುತ್ತೇವೆಯೇ ಎಂದು ವಿದ್ಯಾರ್ಥಿಯೋರ್ವ ಪ್ರಶ್ನಿಸಿದ್ದಾನೆ.