ಇಡೀ ದೇಶಾದ್ಯಂತ ಭಾರೀ ಮಳೆಯಾಗುತ್ತಿದೆ. ಅಲ್ಲಲ್ಲಿ ಅನಾಹುತ, ಜೀವ ಹಾನಿಯ ಬಗ್ಗೆ ವರದಿಯಾಗುತ್ತಿದೆ. ದೆಹಲಿ, ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ಮಳೆ ಅಪರೂಪವಾದರೆ ಕರಾವಳಿ ಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚು. ಅಂದಹಾಗೆ ಮಳೆಯ ಅನಾಹುತವೂ ಈ ಪ್ರದೇಶಗಳಲ್ಲೇ ಹೆಚ್ಚು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರ್‌ನಲ್ಲಿ ನಡೆದ ತಡೆ ಗೋಡೆ ಕುಸಿತದಿಂದ ನಾಲ್ವರು ಮೃತಪಟ್ಟಿದ್ದರು. ಆ ಬಳಿಕ ವಿದ್ಯುತ್ ಅಘಾತಕ್ಕೆ ಇಬ್ಬರು ಮೃತಪಟ್ಟಿದ್ದರು. ಭೂ ಕುಸಿತ, ವಿದ್ಯುತ್ ಆಘಾತ, ಸಿಡಲಾಘಾತ ಮೊದಲಾದ ಕಾರಣಗಳಿಂದ ಈ ಬಾರಿ ಜಿಲ್ಲೆಯಲ್ಲಿ 10ಕ್ಕೂ ಅಧಿಕ ಸಾವು ನೋವುಗಳು ಸಂಭವಿಸಿದೆ.
ಇಂತಹ ಸಂದರ್ಭಗಳಲ್ಲಿ ಘಟನೆಯ ಬಳಿಕ ಪರಿಹಾರ ಘೋಷಿಸುವುದು ಮಾಮೂಲಿಯಾಗಿ ಬಿಟ್ಟಿದೆ.
ಮಳೆಗಾಲಕ್ಕೂ ಮೊದಲು ಸರಕಾರ ಮತ್ತು ಸ್ಥಳೀಯಾಡಳಿತ ಸನ್ನದ್ಧವಾಗದ ಪರಿಣಾಮವೇ ಈ ಸಾವು-ನೋವುಗಳು.
ಮಲೆನಾಡು, ಕರಾವಳಿ ಪ್ರದೇಶಗಳ ಭೂ ಸ್ವರೂಪವೇ ಭಿನ್ನ. ಹಾಗಾಗಿ ಇದನ್ನು ಸ್ಥಳೀಯಾಡಳಿತ ಮೊದಲೇ ಗಣನೆಗೆ ತೆಗೆದುಕೊಂಡು ಕಾರ್ಯಪ್ರವೃತ್ತವಾಗ ಬೇಕಿದೆ. ಈ ಮೂಲಕ ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದು.
ಎಲ್ಲವನ್ನೂ ಸರಕಾರ, ಅಧಿಕಾರಿಗಳ ಹೆಗಲಿಗೆ ಒಪ್ಪಿಸುವುದಲ್ಲ. ಜನಸಾಮಾನ್ಯರಿಗೂ ಈ ನಿಟ್ಟಿನಲ್ಲಿ ಜವಾಬ್ದಾರಿ ಇದೆ.
ಇಳಿಜಾರು, ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆಡೆ, ನದಿ, ಸಮುದ್ರ ತೀರಗಳಲ್ಲಿ ಮನೆಯನ್ನು ಕಟ್ಟಿ ವಾಸ ಮಾಡುವುದನ್ನು ತಡೆಯಬೇಕಿದೆ.
ಈ ಹಿಂದಿನಿಂದಲೂ ಅಂತಹ ಪ್ರದೇಶಗಳಲ್ಲಿ ಇದ್ದವರು ಅಪಾಯದ ಮುನ್ಸೂಚನೆ ಅರಿತ ಕೂಡಲೇ ಅಲ್ಲಿಂದ ಸ್ಥಳಾಂತಗೊಳ್ಳುವುದೂ ಅನಿವಾರ್ಯವಾಗಿದೆ.

Social Icons