Editorial ಕರ್ನಾಟಕದಲ್ಲೀಗ "ಗೌಡರ" ಮನೆಮಕ್ಕಳ ಕಾಮಪುರಾಣದ್ದೇ ಗದ್ದಲ

 


"ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂಬೊಂದು ಮಾತಿದೆ. ಈ ಮಾತು ಹಾಸನದ ಗೌಡರ ಮನೆಮಕ್ಕಳಿಗೆ ಸರಿಯಾಗಿ ಅನ್ವಯಿಸುತ್ತದೆ. ವಿಕೃತ ಕಾಮತೃಷೆ ಈ ಅಣ್ಣ-ತಮ್ಮನನ್ನು ಅಷ್ಟೊಂದು ಮಟ್ಟಿಗೆ ಅಧಪತನಕ್ಕೆ ಇಳಿಸಿದೆ. ಪುರುಷನೊಬ್ಬನಿಗೆ ಪುರುಷಾರ್ಥದ ಕಾಮ ಬೇಕು. ಅದು ಆತನನ್ನು ಮೋಕ್ಷದ ಹಾದಿಯೆಡೆಗೆ ಮುನ್ನಡೆಸುತ್ತದೆ. ಆದರೆ ಯಾವೊಬ್ಬ ಪುರುಷನೂ ಅರಿಷಡ್ವರ್ಗದ ಕಾಮದೆಡೆಗೆ ಹಾತೊರೆಯಬಾರದು ಅದು ಆತನನ್ನು ನೀತಿಗೆಡಿಸುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಈ ಅಣ್ಣ-ತಮ್ಮನಿಗಿದ್ದಿದ್ದು, ಅರಿಷಡ್ವರ್ಗದ ಕಾಮವೂ ಅಲ್ಲ ಅವರಲ್ಲಿದ್ದುದು ವಿಕೃತಕಾಮ. ಅದು ಅವರನ್ನು ಮಾತ್ರವಲ್ಲ ಇಡೀ ಗೌಡರ ಕುಟುಂಬದ ಮಾನವನ್ನೇ ಮೂರಾಬಟ್ಟೆಯನ್ನಾಗಿಸಿದೆ.

ಮನೆಮಕ್ಕಳ "ಕಾಮಪುರಾಣ"ದಿಂದ ಗೌಡರ ಮನೆ ವಿಚಾರ ಹಾದಿ ರಂಪ ಬೀದಿ ರಂಪವಾಗಿದೆ. ಕುಟುಂಬದವರು ತಲೆಯೆತ್ತಿ ನಡೆಯದಂಥಹ ಸ್ಥಿತಿ ಬಂದೊದಗಿದೆ. ಮನೆಯವರೇನು, ಪಕ್ಷದ ಮುಖಂಡರಿಗೂ, ಕಾರ್ಯಕರ್ತರಿಗೂ ಇರಿಸುಮುರಿಸು ಎನಿಸುವ ಪರಿಸ್ಥಿತಿ ಎದುರಾಗಿದೆ. ಹಿಂದೆ ಹಾಸನದಲ್ಲಿ ತಾವು ಈ ಪಕ್ಷದವರು ಎಂದು ಹೇಳಲು ಹೆಮ್ಮೆ ಪಡುತ್ತಿದ್ದ ಕಾರ್ಯಕರ್ತರು, ಮುಖಂಡರುಗಳು ಈ "ಅಣ್ಣ-ತಮ್ಮ" ಮಾಡಿರುವ ಘನ ಕಾರ್ಯಕ್ಕೆ ತಲೆತಗ್ಗಿಸುವಂತಾಗಿದೆ. 'ತಮ್ಮ' ನೂರಾರು ಮಹಿಳೆಯರನ್ನು ತನ್ನ ಮಂಚಕ್ಕೆ ಎಳೆದು ಕಾಮದ ತೀಟೆ ತೀರಿಸಿ ಜೈಲು ಸೇರಿದ. ಆತನ ದೆಸೆಯಿಂದ "ನೀವು ಆ ಪಕ್ಷದವರಲ್ಲವೇ?" ಎಂದು ತಮ್ಮ ಶೀಲದ ಬಗ್ಗೆಯೇ ಶಂಕೆ ವ್ಯಕ್ತಪಡಿಸಿ ಜನರ ಕಡೆಯಿಂದ ಬರುವ ಬಾಣದ ಮೊನೆಯಂತಹ ಪ್ರಶ್ನೆಗಳನ್ನು ಎದುರಿಸಲಾಗದೆ ಪಕ್ಷದಲ್ಲಿ ಗುರುತಿಸಿರುವ ಮಹಿಳೆಯರು ಮನೆಯಲ್ಲಿಯೇ ಮುಖಮುಚ್ಚಿ ಕೂರುವಂತಾಯಿತು. ಕೊನೆಪಕ್ಷ ಮೊಬೈಲ್ ರಿಂಗಿಣಿಸಿದರೂ ಬೆಚ್ಚಿಬೀಳುವ ಸ್ಥಿತಿಗೆ ತಲುಪಿರುವ ಇವರ ಪಕ್ಷದ ಮಹಿಳೆಯರು ಇನ್ನೂ ಮಾಮೂಲಿ ಸ್ಥಿತಿಗೆ ಬಂದಂತಿಲ್ಲ.

ಇದೀಗ ಅಣ್ಣನ ವಿಕೃತ ಕಾಮಪುರಾಣ ಬೀದಿಗೆ ಬಂದಿದೆ. ಆತನ ಸಲಿಂಗಕಾಮದ ದಾಹಕ್ಕೆ ಯುವಕನೊಬ್ಬ ನೋವು ಅನುಭವಿಸುವಂತಾಯ್ತು. ಆತ ಠಾಣೆಯ ಮೆಟ್ಟಿಲೇರಿದ ಪರಿಣಾಮ ತಮ್ಮ ಜೈಲು ಸೇರಿದ ಬೆನ್ನಲ್ಲೇ ಅಣ್ಣನೂ ಜೈಲುಪಾಲಾದ. ಈತನ ಸಲಿಂಗ ಕಾಮಪುರಾಣ ಬಯಲಾದ ಬಳಿಕ ಇವರ ಪಕ್ಷದಲ್ಲಿ ಗುರುತಿಸಿಕೊಂಡಿರುವ ಪುರುಷರ ಬಗ್ಗೆಯೂ ಜನರು ಅನುಮಾನ ವ್ಯಕ್ತಪಡಿಸುವಂತಾಗಿದೆ. ನಾವು ಕಳಂಕಿತರಲ್ಲ ಎಂದು ಪಕ್ಷದ ಪುರುಷರು - ಮಹಿಳೆಯರು ಸಾರಿಸಾರಿ ಹೇಳುತ್ತಿದ್ದರೂ ಆ ಮಾತನ್ನು ನಂಬುವವರು ಬೇಕಲ್ಲ. ಇವರ ಪಕ್ಷವನ್ನು ನಂಬಿ ಬಂದವರಿಗೆ ಇವರು ಕೊಟ್ಟ ಬಹುದೊಡ್ಡ ಉಡುಗೊರೆ ಇದೇ ನೋಡಿ. ನಾಚಿಕೆ - ಹೇಸಿಗೆ ಎಂದರೆ ಏನೆಂದು ಗೊತ್ತಿಲ್ಲದೆ ಬದುಕಿದರೆ ಮಾತ್ರ ಹೀಗಾಗೋದು ನೋಡಿ.

ಹಾಸನದ ಗೌಡರ ಮನೆಯ ದೊಡ್ಡವರ ಬಗ್ಗೆಯೂ ಇದೇ ರೀತಿಯ ಅಪವಾದ ಇದೆ. ಆದ್ದರಿಂದಲೇ ದೊಡ್ಡಗೌಡರ ಎರಡನೇ ಪುತ್ರ ಇತ್ತೀಚೆಗಷ್ಟೇ ಜೈಲು ಕದ ತಟ್ಟಿ ಬಂದಿದ್ದಾರೆ. ಇದೀಗ ಮಕ್ಕಳ ಸರದಿ. ಅಣ್ಣ-ತಮ್ಮನ ಅತಿರೇಕದ ಕಾಮತೀಟೆಯ ಪರಿಣಾಮ ಇಬ್ಬರೂ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಅನಾಯಾಸವಾಗಿ ಬಂದ ಅಧಿಕಾರದ ಮದ ಇಬ್ಬರಿಗೂ ತಲೆಗಡರಿ ಹೋಯಿತು. ಹೆಂಡ ಕುಡಿದ ಕೋತಿಯಂತಾಡಿ ಇಬ್ಬರೂ ಮತಿಗೆಟ್ಟ ಬಾಳು ಬದುಕಿದರು. ಜೊತೆಗೊಂದಷ್ಟು ಮಂದಿಯನ್ನು ಮುಖಮುಚ್ಚಿ ಬದುಕುವಂತಹ ಸ್ಥಿತಿಗೆ ತಂದು ನಿಲ್ಲಿಸಿದರು. ಒಟ್ಟಿನಲ್ಲಿ ಕಳಂಕ ಹೊತ್ತ ಗೌಡರಮನೆಯ ಕುಲಪುತ್ರರಿಬ್ಬರು ಕರ್ನಾಟಕಕ್ಕೆ ಕಪ್ಪುಚುಕ್ಕೆಗಳಾದರು ಎಂದಷ್ಟೇ ಹೇಳಬೇಕಾಗಿದೆ.