Editorial | ಮಾದಕವಸ್ತುಗಳ ಕಬಂಧ ಬಾಹುಗಳಲ್ಲಿ ಯುವಜನತೆ- ಬೀಳಲೇಬೇಕಿದೆ ಕಡಿವಾಣ

 ಯುವಜನತೆ ದಾರಿ ತಪ್ಪುತ್ತಿದ್ದಾರೆ, ಸಂಸ್ಕಾರದ ಕೊರತೆ ಎದುರಾಗಿದೆ, ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿದೆ, ಇವೆಲ್ಲವೂ ಇತ್ತೀಚಿನ ದಶಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮಾತು. ಅಪರಾಧಗಳು ನಡೆದ ಮೇಲೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ ಹೊರತು ಆ ಕೃತ್ಯಗಳಿಗೆ ಮೂಲ ಕಾರಣ ಏನು ಎನ್ನುವುದನ್ನು ತಿಳಿಯುವ ಪ್ರಯತ್ನ ನಡೆಯುವುದು ಬಹುತೇಕ ಕಡಿಮೆ ಎಂದೇ ಹೇಳಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇವುಗಳಿಗೆ ಮೂಲವನ್ನು ಹುಡುಕಹೊರಟಾಗ ಸಿಗುವುದು ಮಾದಕದ್ರವ್ಯದ ಕರಾಳ ಲೋಕ. 



ಹೌದು, ಸ್ಥಳೀಯ ಪೊಲೀಸರಿಂದ ಆರಂಭಿಸಿ ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಯಾರು ಎಷ್ಟೇ ಪ್ರಯತ್ನಿಸಿದರೂ, ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಮಾದಕ ವಸ್ತು ಜಾಲಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ನುಸುಳಿದ್ರೆ ಡ್ರಗ್ಸ್ ದಂಧೆಕೋರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಹೊಸಹೊಸ ಮಾರ್ಗಗಳಲ್ಲಿ ಡ್ರಗ್ಸ್ ಎಗ್ಗಿಲ್ಲದೇ ಪೂರೈಕೆಯಾಗುತ್ತಿದೆ. ಈ ಜಾಲಕ್ಕೆ ಸುಲಭವಾಗಿ ಬಲಿಯಾಗುವವರು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು, ಸಾಫ್ಟ್ವೇರ್ ಕಂಪನಿ ಉದ್ಯೋಗಿಗಳು ಹಾಗೂ ಶ್ರೀಮಂತ ವರ್ಗದ ಯುವಕ, ಯುವತಿಯರು. ಪ್ರಮುಖ ನಗರಗಳಲ್ಲಿ ನಡೆಯುವ ಪಾರ್ಟಿಗಳು, ಪಬ್, ಡ್ಯಾನ್ಸ್ಬಾರ್ಗಳಲ್ಲೂ ಇದರ ಘಾಟು ಹೆಚ್ಚಾಗಿದೆ. ಕೂಲಿಕಾರ್ವಿುಕರು, ಬಡವರ್ಗದ ಯುವಕ- ಯುವತಿಯರು ಗಾಂಜಾ ಖರೀದಿಸಿ ಸೇವಿಸುತ್ತಾರೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ. 

ಡ್ರಗ್ಸ್ ದಂಧೆಯ ಕುರಿತು ಬಂದಿರುವ ಇತ್ತೀಚಿನ ವರದಿಗಳು ಬೆಚ್ಚಿಬೀಳಿಸುವಂತಿವೆ. ಈ ವರದಿಗಳ ಪ್ರಕಾರ, 15-64 ವಯೋಮಾನದವರಲ್ಲಿ ಸುಮಾರು 296 ದಶಲಕ್ಷ ಜನರು ಮಾದಕ ವ್ಯಸನದ ಬಳಕೆಯಲ್ಲಿ ತೊಡಗಿದ್ದಾರೆ. ಅರಿವು, ಕಾನೂನುಗಳು ಮತ್ತು ನಿಬಂಧನೆಗಳ ಹೊರತಾಗಿಯೂ ಜನರು ಈ ಮಾದಕ ದ್ರವ್ಯಗಳ ಸೇವನೆಗೆ ಒಳಗಾಗುತ್ತಿದ್ದಾರೆ. 2019ರಿಂದ 2021ರ ಅಂತ್ಯದವರೆಗೆ ಕರ್ನಾಟಕದಲ್ಲಿ ಎನ್ಸಿಬಿ ಹಾಗೂ ಸ್ಥಳೀಯ ಪೊಲೀಸರು 8,500 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 12,607 ಆರೋಪಿಗಳನ್ನು ಬಂಧಿಸಿದ್ದು, 1,482 ಕೆಜಿ ಚರಸ್, 12,055 ಕೆಜಿ ಮೆಥಂಪೆಟಮೈನ್ ಹಾಗೂ 32,000 ಕೆಜಿಯಷ್ಟು ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. 

ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ತಮಿಳುನಾಡಿನ ಕೃಷ್ಣಗಿರಿ, ಒಡಿಶಾ ಮತ್ತು ಗೋವಾದಿಂದ ಬೆಂಗಳೂರಿಗೆ ಗಾಂಜಾ ರವಾನೆಯಾಗುತ್ತಿದೆ. ಆದರೆ, ಎಲ್ಎಸ್ಡಿ, ಎಂಡಿಎಂಎ, ಮಿಯ್ನಾಂ, ಕೊಕೇನ್, ಬ್ರೌನ್ಶುಗರ್, ಹಶಿಸ್ನಂತಹ ಡ್ರಗ್ಸ್ ವಿದೇಶಗಳಿಂದ ಬರುತ್ತಿದೆ. ಪಾಕಿಸ್ತಾನ, ಅಪ್ಘಾನಿಸ್ತಾನ, ಇರಾನ್, ಮ್ಯಾನ್ಮಾರ್ನಿಂದ ಹೆರಾಯಿನ್, ಅಫೀಮಿನಂಥ ಡ್ರಗ್ಸ್ ರಾಜ್ಯಕ್ಕೆ ಕಾಲಿಡುತ್ತಿದೆ. ಮುಂಬೈ, ಗೋವಾ, ಮಂಗಳೂರು, ಚೆನ್ನೈಗೆ ಸಮುದ್ರಮಾರ್ಗದಲ್ಲಿ ಕೋಟ್ಯಂತರ ರೂ. ಮೌಲ್ಯದ ಹೊಸ ಡ್ರಗ್ಸ್ಗಳು ಬರಲಾರಂಭಿಸಿವೆ. ಅಲ್ಲಿಂದ ರೈಲು ಮತ್ತು ಬಸ್ಗಳ ಸಹಾಯದಿಂದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ತಿಳಿದುಬಂದಿರುವ ಮಾಹಿತಿ. 

ಡ್ರಗ್ಸ್ ವಹಿವಾಟು ಬಹುತೇಕ ಡಾರ್ಕ್ ವೆಬ್ಸೈಟ್ನಲ್ಲೇ ನಡೆಯುತ್ತಿದೆ. ಡ್ರಗ್ಸ್ ಆರ್ಡರ್ ಮಾಡಿದವರು ಯಾರು? ಎಲ್ಲಿಂದ? ಎಂಬ ಮಾಹಿತಿ ಬಹಿರಂಗವಾಗುವುದಿಲ್ಲ. ಡೆಲಿವರಿ ಮಾಡುವ ಸಂದರ್ಭದಲ್ಲಿ ಮಾತ್ರವೇ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಡ್ರಗ್ಸ್ ಬುಕ್ ಮಾಡಿದವರಿಗೆ ಕೊರಿಯರ್ ಮೂಲಕ ಮನೆಬಾಗಿಲಿಗೇ ತಲುಪುತ್ತದ ಎಂದರೆ ಇದರ ಜಾಲ ಅದೆಷ್ಟು ವ್ಯವಸ್ಥಿತವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. 

ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಡ್ರಗ್ಸ್ ಪಿಡುಗಿನ ವಿರುದ್ಧ ಹೋರಾಡಲು ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನ ಆಚರಿಸಲಾಗುತ್ತಿದೆ. 'ಮಾದಕವಸ್ತುಗಳ ಬಳಕೆಗೆ ಮಾಡುತ್ತಿದ್ದ ಹೂಡಿಕೆಯನ್ನು ಇನ್ನು ಮುಂದೆ ತಡೆಗಟ್ಟಿ' ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಣಿಕೆ ವಿರೋಧಿ ಸಪ್ತಾಹ ಆಚರಿಸಲಾಗುತ್ತಿದೆ. ಇದು ನೈಜಾರ್ಥದಲ್ಲಿ ಅನುಷ್ಠಾನವಾಗಲಿ. ಈ ಮೂಲಕ ಯುವಸಮಾಜ ಮಾದಕದ್ರವ್ಯ ವ್ಯಸನಮುಕ್ತವಾಗಲಿ ಎನ್ನುವುದು ಆಶಯ.